ಬೆಂಗಳೂರು: ಈ ಬಾರಿಯ ನೀಟ್ ಫಲಿತಾಂಶ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಸಹ ಮಾಡಿಕೊಂಡಿದ್ದು ಕೇಂದ್ರ ಸರ್ಕಾರ ಇನ್ನಷ್ಟು ಅನಾಹುತಗಳಿಗೆ ಅವಕಾಶವಾಗದಂತೆ ಸರಿಯಾದ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಬೋಸರಾಜು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಈ ಬಾರಿ ಆಶ್ಚರ್ಯಕರ ರೀತಿಯಲ್ಲಿ ೬೭ ಜನ ವಿದ್ಯಾರ್ಥಿಗಳು ೭೨೦/೭೨೦ ಅಂಕ ಪಡೆದಿದ್ದು ಪ್ರತಿಷ್ಠಿತ ಏಮ್ಸ್ ನಲ್ಲಿ ಲಭ್ಯ ಇರುವ ಪ್ರವೇಶಾತಿ ಸಂಖ್ಯೆಯೇ ೫೬ ಆಗಿದ್ದು ಉಳಿದ ೧೧ ವಿದ್ಯಾರ್ಥಿಗಳ ಆಸೆ ಭಗ್ನವಾಗುತ್ತದೆ. ಈ ಹಿನ್ನಲೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಅನುಮಾನ ವ್ಯಕ್ತಪಡಿಸಿದ್ದು ತಕ್ಷಣ ಉನ್ನತಮಟ್ಟದ ತನಿಖೆ ನಡೆಸಬೇಕಾದ ಸಚಿವರು ಆಗ್ರಹಿಸಿದ್ದಾರೆ.
ಜೂನ್ ೧೪ ಕ್ಕೆ ಘೋಷಣೆಯಾಗಬೇಕಾದ ಫಲಿತಾಂಶ ತರಾತುರಿಯಲ್ಲಿ ಜೂನ್ ೪ ಘೋಷಣೆ ಮಾಡಿದ್ದು ಸಹ ಅನುಮಾನಕ್ಕೆ ಕಾರಣವಾಗಿದೆ. ನೀಟ್ ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ನೀಡುವ ಕ್ರಮ ಇದ್ದರೂ ಇಷ್ಟೊಂದು ವಿದ್ಯಾರ್ಥಿಗಳು ೧೦೦% ಅಂಕಗಳಿಸಲು ಸಾಧ್ಯವಾಯ್ತು ಎನ್ನುವುದು ಆಶ್ಚರ್ಯ ಮೂಡಿಸುತ್ತದೆ. ಈ ಅನುಮಾನಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಸಚಿವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.