Wednesday, April 9, 2025
Google search engine

Homeರಾಜ್ಯಸುದ್ದಿಜಾಲಮಗುವಿನ ಚಿಕಿತ್ಸೆಗೆ ನಿರ್ಲಕ್ಷ: ವೈದ್ಯರ ನಡೆಗೆ ಖಂಡನೆ

ಮಗುವಿನ ಚಿಕಿತ್ಸೆಗೆ ನಿರ್ಲಕ್ಷ: ವೈದ್ಯರ ನಡೆಗೆ ಖಂಡನೆ

ಲೋಕಾಯುಕ್ತ ಡಿವೈಎಸ್ಪಿ ತೀವ್ರ ತರಾಟೆ

ಕೆ.ಆರ್.ನಗರ : ಬಿಸಿ ಹಾಲು ಚೆಲ್ಲಿ ಒಂದುವರೆ ವರ್ಷದ ಮಗುವಿನ ಹೊಟ್ಟೆ ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಚಿಕಿತ್ಸೆಗಾಗಿ ಪಟ್ಟಣದ ತಾಲೂಕು ಆಸ್ಪತ್ರೆಗೆ ಬಂದಿದ್ದರೂ, 3 ಗಂಟೆಗಳು ಕಾದು ಕುಳಿತರೂ ಚಿಕಿತ್ಸೆ ಮಾಡದೆ ನಿರ್ಲಕ್ಷ್ಯ ಮಾಡಲಾಗಿದ್ದು, ಈ ಸಂಬಂಧ ಲೋಕಾಯುಕ್ತರು ಆಗಮಿಸಿ ಮಗುವಿಗೆ ಚಿಕಿತ್ಸೆಕೊಡಿಸಿರುವ ಘಟನೆ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಇಂದು ಶನಿವಾರ ನಡೆದಿದ್ದು ಈ ಘಟನೆ ಕುರಿತು ಪಟ್ಟಣ ಹಾಗೂ ತಾಲ್ಲೂಕಿನ ಜನರು ತೀವ್ರವಾಗಿ ಖಂಡಿಸಿದ್ದಾರೆ.

ಕೆ.ಆರ್.ನಗರ ತಾಲ್ಲೂಕಿನ ಅರ್ಜುನಹಳ್ಳಿ ಗ್ರಾಮದ ಕೆಂಪರಾಜು, ಅಂಬಿಕಾ ದಂಪತಿಗಳ ಪುತ್ರ ಒಂದೂವರೆ ವರ್ಷದ ಹೇಮಂತ್, (೧.೫ ವರ್ಷ) ಇಂದು ಬೆಳಗ್ಗೆ ಓಲೆಯ ಮೇಲಿದ್ದ ಕಾಯ್ದಿರಿಸಿದ ಬಿಸಿ ಹಾಲನ್ನು ತನ್ನ ಎದೆ ಭಾಗದ ಮೇಲೆ ಚೆಲ್ಲಿ ಕೊಳ್ಳಲಾಗಿ ತೀವ್ರ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಪಟ್ಟಣದ ತಾಯಿ ಮಕ್ಕಳ‌ ಆಸ್ಪತ್ರೆಗೆ ಹೋಗಿದ್ದಾರೆ ಅಲ್ಲಿನ ಆಸ್ಪತ್ರೆಯ ಮಕ್ಕಳ ವೈದ್ಯರು ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೂಡಲೇ ಮಗುವನ್ನು ಕರೆದು ಕೊಂಡು ತಾಲ್ಲೂಕು ಆಸ್ಪತ್ರೆಗೆ ಬಂದಿದ್ದು ಸುಮಾರು ಎರಡು ಮೂರು ಗಂಟೆ ಕಾದರೂ ಯಾವೊಬ್ಬ ಸಿಬ್ಬಂದಿಗಳು, ವೈದ್ಯರು ಚಿಕಿತ್ಸೆ‌ನೀಡದೇ ನಿರ್ಲಕ್ಷ್ಯ ತೋರಿದ್ದಾರೆ.

ಇದೇ ವೇಳೆಯಲ್ಲಿ ಮೈಸೂರಿನಿಂದ ಲೋಕಾಯುಕ್ತ ಡಿವೈಎಸ್ ಪಿ ಮಾಲತೇಶ್ ಹಾಗೂ ಇನ್ಸ್ ಪೆಕ್ಟರ್ ರವಿಕುಮಾರ್, ಸಿಬ್ಬಂದಿಗಳಾದ ಆಶಾ, ದಿವ್ಯ, ಸುಂದರೇಶ್, ದಿನೇಶ್ ಅವರುಗಳ ತಂಡ ದಿಢೀರನೆ ಭೇಟಿ ನೀಡಿದ್ದಾರೆ. ತಾಯಿ ತನ್ನ ಮಗುವಿನ ಚಿಕಿತ್ಸೆಗಾಗಿ ಒಂದೆಡೆ ಕುಳಿತ್ತಿರುವ ದೃಶ್ಯ ಕಂಡ ಲೋಕಾಯುಕ್ತ ಡಿವೈಎಸ್ ಪಿ ಮಾಲತೇಶ್ ಕೂಡಲೇ ಕರ್ತವ್ಯ ನಿರತ ವೈದ್ಯರನ್ನು ಹಾಗೂ ಆಸ್ಪತ್ರೆಗೆ ಆಡಳಿತ ವೈದ್ಯರನ್ನು ಕರೆದು ತೀವ್ರ ತರಾಟೆ ತೆಗೆದು ಕೊಂಡರು. ಈ ಕೂಡಲೇ ಸುಟ್ಟಗಾಯಗಳಾಗಿರುವ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ತಾಕೀತು ಮಾಡಲಾಗಿ, ಆ ಕ್ಷಣದಲ್ಲಿ ಮಗುವಿಗೆ ಚಿಕಿತ್ಸೆ ನೀಡಲು ದಾಖಲು ಮಾಡಿಕೊಳ್ಳಲಾಯಿತು.

ಲೋಕಾಯುಕ್ತ ಡಿವೈಎಸ್ಪಿ ಮಾಲತೇಶ್ ತಂಡ ಆಸ್ಪತ್ರೆಯ ಎಲ್ಲಾ ಕಡೆ ಪರಿಶೀಲನೆ ನಡೆಸಿ ರೋಗಿಗಳಿಂದ ಹಾಗೂ ಸ್ಥಳೀಯ ಜನರಿಂದ ಆಸ್ಪತ್ರೆಯ ಬಗ್ಗೆ ಮಾಹಿತಿ‌ ಪಡೆದು ಕೊಂಡರು. ಆಸ್ಪತ್ರೆಗೆ ಬೆಳಗ್ಗೆ ಬಂದಿದ್ದೇವೆ ಇಷ್ಟೊತ್ತಾದರೂ ಏನಕ್ಕೆ ಬಂದಿದ್ದಿರಿ ಎಂದು ಕೇಳುವರಿಲ್ಲ, ಎಂದು ಸಾರ್ವಜನಿಕರೊಬ್ಬರು ತಮ್ಮ ದೂರುಗಳನ್ನು ಹೇಳಿ ಕೊಂಡರು. ಔಷದಿ, ಮಾತ್ರೆ ವಿತರಣಾ ಕೇಂದ್ರದಲ್ಲಿ ಪಾರ್ಮಸಿಸ್ಟ್ ಇಲ್ಲದೆ ಬೇರೊಬ್ಬರು ಮಾತ್ರೆ ಕೊಡುತ್ತಿರುವುದನ್ನು ಕಂಡು ಎಲ್ರೀ ನಿಮ್ಮ ಪಾರ್ಮಸಿಸ್ಟ್ ಎಂದು ತೀವ್ರ ತರಾಟೆ ತೆಗೆದು ಕೊಂಡ ಲೋಕಾಯುಕ್ತರು ಜನರಲ್ ವಾರ್ಡ್, ತುರ್ತು ಚಿಕಿತ್ಸಾ ವಿಭಾಗ, ಹೋರಬರೋಗಿಗಳ ಚಿಕಿತ್ಸೆ ವಿಭಾಗ ಸೇರಿದಂತೆ ಆಸ್ಪತ್ರೆಯ ಅನೇಕ ಕಡೆಗಳಲ್ಲಿ ಪರಿಶೀಲನೆ ಮಾಡಿದರು. ಈ ಸಂಬಂದ ಎಲ್ಲವನ್ನು ಪರಿಶೀಲನೆ ಮಾಡಿದ್ದೇವೆ ಈ ಆಸ್ಪತ್ರೆಯ ಲೋಪದೋಷಗಳನ್ನು ಪಟ್ಟಿ ಮಾಡಿ ವರದಿಯನ್ನು ಲೋಕಾಯುಕ್ತ ಎಸ್.ಪಿ ಅವರಿಗೆ ಸಲ್ಲಿಸುವುದಾಗಿ ತಿಳಿಸಿದರು.

ತಾಲ್ಲೂಕು ಆಸ್ಪತ್ರೆಗೆ ದಿಢೀರನೆ ಲೋಕಾಯುಕ್ತ ಡಿವೈಎಸ್ಪಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಿಢೀರ್ ಆಸ್ಪತ್ರೆಗೆ ಬರಲು ಕಾರಣ ಏಕೆ ಸಾರ್ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಲೋಕಾಯುಕ್ತ ಡಿವೈಎಸ್ಪಿ ಅವರು ಮಾತನಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಇದ್ದರು, ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ, ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಬಂದಿದ್ದೇವೆ ಎಂದು ತಿಳಿಸಿದ ಅವರು ಸಾರ್ವಜನಿಕರು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡದಿರುವ ಬಗ್ಗೆ ದೂರುಗಳು ಇದ್ದರೆ ತಿಳಿಸಿ ಎಂದರು. ನೆರದಿದ್ದ ಜನರು ಆಸ್ಪತ್ರೆ ಬಗ್ಗೆ ದೂರಿನ ಸುರಿಮಳೆಗೈದರು.

ಇನ್ಸ್ ಪೆಕ್ಟರ್ ರವಿಕುಮಾರ್, ಸಿಬ್ಬಂದಿಗಳಾದ ಆಶಾ, ದಿವ್ಯ, ಸುಂದರೇಶ್, ದಿನೇಶ್, ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ನಾಗೇಂದ್ರ, ವೈದ್ಯರಾದ ಡಾ.ಶಿವಶಂಕರ್, ಪುರಸಭೆ ಮಾಜಿ ಜಿ.ಪಿ.ಮಂಜುನಾಥ್, ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯ ಲೋಕೇಶ್ ಇದ್ದರು.

RELATED ARTICLES
- Advertisment -
Google search engine

Most Popular