ಕೊಪ್ಪಳ: ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಆಗುತ್ತಿಲ್ಲ ಎಂದು ಹುಲಗಿ ಗ್ರಾಮ ಪಂಚಾಯತ್‌ನ ಕೆಲವು ಸದಸ್ಯರು ಮತ್ತು ಅಲ್ಲಿನ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹುಲಿಗಿಯ ದೇವಸ್ಥಾನದ ಆಡಳಿತಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರ ಮುಂದೆ ಹತ್ತಾರು ಸಮಸ್ಯೆಗಳನ್ನು ಪಟ್ಟಿ ಮಾಡಿದ ಗ್ರಾಮಸ್ಥರು, ಭಕ್ತರಿಂದ ದೇವಸ್ಥಾನಕ್ಕೆ ಕೋಟಿ ಕೋಟಿ ರೂ ಹಣ ಹರಿದು ಬರುತ್ತಿದೆ. ದೇವಸ್ಥಾನದಲ್ಲಿ 55 ಕೋಟಿ ರೂ. ನಿಶ್ಚಿತ ಠೇವಣಿ ಇದೆ. 2018-19ರಲ್ಲಿ 7.47 ಕೋಟಿ ರೂ., 2019-20ರಲ್ಲಿ 9.28 ಕೋಟಿ ರೂ., 2020-21ರಲ್ಲಿ 4.33 ಕೋಟಿ ರೂ., 2021-22ರಲ್ಲಿ 7.11 ಕೋಟಿ ರೂ., ಮತ್ತು 2022-23ರಲ್ಲಿ 14.27 ಕೋಟಿ ರೂ. ನಷ್ಟು ದೇವಸ್ಥಾನಕ್ಕೆ ಆದಾಯ ಸಂಗ್ರಹವಾದ ಬಗ್ಗೆ ಮಾಹಿತಿ ಇದೆ. ಈ ಹಣವು ಸದ್ಬಳಕೆ ಆಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಹಾಗೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಈ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಕನಿಷ್ಟ 60 ಸಾವಿರ ಜನರು ಬರುತ್ತಾರೆ. ಪ್ರತಿ ಹುಣ್ಣಿಮೆಗೆ ಲಕ್ಷಗಟ್ಟಲೇ ಜನರು ಸೇರುತ್ತಾರೆ. ಅಗತ್ಯ ಸಂಖ್ಯೆಯಲ್ಲಿ ಸ್ನಾನಗೃಹಗಳು ಮತ್ತು ಶೌಚಾಲಯಗಳು ಇಲ್ಲದ ಕಾರಣ ಜನರು ಎಲ್ಲೆಂದರಲ್ಲಿ ಶೌಚಕ್ಕೆ ತೆರಳಿ ಮಲೀನ ಮಾಡುತ್ತಾರೆ. ದೇವಸ್ಥಾನದ ಸುತ್ತಲು ಶುಚಿತ್ವ ಇಲ್ಲದೇ ಇರುವುದರಿಂದ ನೋಣಗಳು ಆಡುತ್ತವೆ. ದೇವಸ್ಥಾನದ ಸುತ್ತಲು ಆರೋಗ್ಯಕರ ಪರಿಸರ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿಗಳು, ದೇವಸ್ಥಾನದ ಆವರಣದಲ್ಲಿ ಹೊಸದಾಗಿ 120 ಶೌಚಾಲಯಗಳನ್ನು ನಿರ್ಮಿಸಲು ನಿರ್ಮಿತಿಯಿಂದ ಪ್ರಸ್ತಾವಣೆ ಪಡೆದಿದ್ದೇವೆ ಎಂದು ತಿಳಿಸಿದರು. ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವಾಗ 120 ಶೌವಾಲಯಗಳು ಸಾಲುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಹುಲಿಗಿಯಲ್ಲಿ ಪ್ರಸಿದ್ಧ ದೇವಾಲಯವಿದ್ದರೂ ಗ್ರಾಮದ ಬಸ್ ನಿಲ್ದಾಣದಲ್ಲಿ ಲೈಟಿನ ವ್ಯವಸ್ಥೆ ಇಲ್ಲ. ಬಸ್ ನಿಲ್ದಾಣದ ಆವರಣದಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಕೆಲವು ಗ್ರಾಪಂ ಸದಸ್ಯರಿಗೆ ಅಭಿವೃದ್ಧಿ ಕಾರ್ಯ ಮಾಡುವ ಆಸಕ್ತಿ ಇಲ್ಲ ಎಂದು ಗ್ರಾಮದ ಮುಖಂಡರು ಸಚಿವರಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹುಲಿಗಿ ದೇವಸ್ಥಾನದ ಬಗ್ಗೆ ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಗಮನಿಸಿಯೇ ಪರಿಶೀಲನೆಗೆಂದು ಬಂದಿರುವೆ. ದೇವಸ್ಥಾನದ ಜಾಗ ಬಿಟ್ಟು 30 ಎಕರೆ ಜಮೀನು ಖರೀದಿಸಲಾಗಿದೆ ಎನ್ನುವ ಮಾಹಿತಿ ಇದೆ. ಅಧಿಕಾರಿಗಳು ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಜಾಗದ ವ್ಯವಸ್ಥೆ ಇದ್ದರೆ ಹಂತಹಂತವಾಗಿ ಎಲ್ಲವನ್ನು ಮಾಡಬಹುದು. ಗುಣಮಟ್ಟದ ಕೆಲಸ ಕಾರ್ಯಗಳಾಗಲು ಗ್ರಾಮ ಪಂಚಾಯತ್ ಸದಸ್ಯರು ಸಹಕಾರ ನೀಡಬೇಕು ಎಂದರು.