ನವದೆಹಲಿ : ಆದಾಯ ತೆರಿಗೆ ಕಾಯ್ದೆ ಅಡಿ ರೂಪಿಸಲಾಗಿರುವ ಹೊಸ ಐಟಿ ನಿಯಮಾವಳಿಯಲ್ಲಿ ಕೆಲ ಮಹತ್ವದ ಬದಲಾವಣೆ ಇದೆ. ಹೊಸ ಪ್ಯಾನ್ ಪಡೆಯಲು ಬೇಕಾದ ಪ್ರಕ್ರಿಯೆ, ಕೆಲ ನಿರ್ದಿಷ್ಟ ಹಣಕಾಸು ವಹಿವಾಟಿಗೆ ಪ್ಯಾನ್ ಅಗತ್ಯ ಇರುವುದು ಇತ್ಯಾದಿ ಕೆಲ ಗಮನಾರ್ಹ ಬದಲಾವಣೆಗಳಿವೆ. 10 ಲಕ್ಷಕ್ಕೂ ಅಧಿಕ ಮೊತ್ತದ ಕ್ಯಾಷ್ ಡೆಪಾಸಿಟ್ ಇತ್ಯಾದಿ ಅಧಿಕ ಮೌಲ್ಯದ ಟ್ರಾನ್ಸಾಕ್ಷನ್ಗಳಿಗೆ ಪ್ಯಾನ್ ನಂಬರ್ ನೀಡುವುದು ಕಡ್ಡಾಯ ಮಾಡಲಾಗಿದೆ. ಹಾಗೆಯೇ, ವಿವಿಧ ಪ್ರಾಕಾರದ ತೆರಿಗೆ ಪಾವತಿದಾರರಿಗೆ ಬೇರೆ ಬೇರೆ ನಮೂನೆಯ ಅರ್ಜಿಗಳನ್ನು ನೀಡಲಾಗುತ್ತದೆ.
ಹಳೆಯ ವ್ಯವಸ್ಥೆ ಅಡಿ ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಫಾರ್ಮ್ 49ಎ ಅಥವಾ 49ಎಎ ನೀಡಲಾಗುತ್ತಿತ್ತು. ಭಾರತೀಯ ನಾಗರಿಕರು ಮತ್ತು ಕಂಪನಿಗಳಿಗೆ ಫಾರ್ಮ್ 49ಎ ಮತ್ತು ವಿದೇಶೀ ಪ್ರಜೆಗಳು ಮತ್ತು ಸಂಸ್ಥೆಗಳಿಗೆ ಫಾರ್ಮ್ 49ಎಎ ನೀಡಲಾಗುತ್ತಿತ್ತು.
ಹೊಸ ನಿಯಮ ಅಡಿ ಫಾರ್ಮ್ 93, 94, 95, 96 ಅನ್ನು ನೀಡಲಾಗುತ್ತಿದೆ. ಭಾರತೀ ಪ್ರಜೆಗಳು ಫಾರ್ಮ್ 93 ಅನ್ನು ಭರ್ತಿ ಮಾಡಬೇಕು. ಭಾರತೀಯ ಕಂಪನಿಗಳು ಫಾರ್ಮ್ 94, ಭಾರತೀಯ ಪ್ರಜೆಗಳಲ್ಲದವರು ಫಾರ್ಮ್ 95, ಹಾಗೂ ಭಾರತದ ಹೊರಗಿನ ಕಂಪನಿಗಳು ಫಾರ್ಮ್ 96 ಅನ್ನು ಪಡೆದು ಭರ್ತಿ ಮಾಡಬೇಕು.
ಮುಂಚೆ ಇದ್ದ ನಿಯಮ ಪ್ರಕಾರ ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಆಧಾರ್ ಅನ್ನು ಕಡ್ಡಾಯವಾಗಿ ನೀಡಬೇಕಿತ್ತು. ಈಗ ಆಧಾರ್ ಜೊತೆಗೆ ಹೆಚ್ಚುವರಿ ದಾಖಲೆಗಳನ್ನೂ ನೀಡಬೇಕಾಗುತ್ತದೆ. ಜನನ ಪ್ರಮಾಣಪತ್ರ, ವೋಟರ್ ಐಡಿ, ಪಾಸ್ಪೋರ್ಟ್, ಡಿಎಲ್, ಎಸ್ಸೆಸ್ಸೆಲ್ ಸರ್ಟಿಫಿಕೇಟ್ ಮತ್ತು ಇತರ ಸರ್ಕಾರಿ ದಾಖಲೆಗಳಿದ್ದರೆ ಅದನ್ನು ನೀಡಬಹುದು.
ಬ್ಯಾಂಕ್ನಲ್ಲಿ ಒಂದು ದಿನದಲ್ಲಿ 50,000 ರೂಗಿಂತ ಹೆಚ್ಚು ಕ್ಯಾಷ್ ಡೆಪಾಸಿಟ್ ಮಾಡಿದರೆ ಪ್ಯಾನ್ ನಮೂದಿಸಬೇಕಿತ್ತು. ಈಗ ಹೊಸ ನಿಯಮದ ಪ್ರಕಾರ ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಕಡಿಮೆ ಕ್ಯಾಷ್ ಡೆಪಾಸಿಟ್ ಅಥವಾ ವಿತ್ಡ್ರಾಯಲ್ಗೆ ಪ್ಯಾನ್ ಕಡ್ಡಾಯವಲ್ಲ. ಹಾಗೆಯೇ ಈ ಕೆಳಗಿನ ಕಾರ್ಯಗಳಿಗೆ ಪ್ಯಾನ್ ಕಡ್ಡಾಯ ಇರುತ್ತದೆ.
- ಐದು ಲಕ್ಷ ರೂ ಗಿಂತ ಹೆಚ್ಚಿನ ಮೌಲ್ಯದ ವಾಹನ ಖರೀದಿಸುತ್ತಿದ್ದರೆ ಪ್ಯಾನ್ ನೀಡಬೇಕು.
- ಹೋಟೆಲ್ ಅಥವಾ ರೆಸ್ಟೋರೆಂಟ್, ಇವೆಂಟ್ಗಳಿಗೆ ಒಂದು ಲಕ್ಷ ರೂಗಿಂತ ಹೆಚ್ಚಿನ ಪೇಮೆಂಟ್ ಮಾಡುವುದಾದರೆ ಪ್ಯಾನ್ ನೀಡಬೇಕು.
- ಚಿರಾಸ್ತಿಯ ಖರೀದಿ ಮತ್ತು ಮಾರಾಟ ಮಾಡುವಾಗ, ಅದರ ಮೌಲ್ಯ 20 ಲಕ್ಷ ರೂಗಿಂತ ಹೆಚ್ಚಿದ್ದರೆ ಪ್ಯಾನ್ ಕಡ್ಡಾಯ.
- ಜೀವ ವಿಮೆ ಪಾಲಿಸಿಗೆ ಪ್ಯಾನ್ ಕಡ್ಡಾಯ.



