ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಹೊಸ ಕೈಗಾರಿಕಾ ನೀತಿ ಜಾರಿ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಘೋಷಿಸಿದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ’ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ’ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮುಖ್ಯಮಂತ್ರಿ ಮಾತನಾಡಿದರು.
“ಈ ಹಿಂದೆ ನಮ್ಮ ಸರ್ಕಾರ ಜಾರಿ ತಂದಿದ್ದ ಕೈಗಾರಿಕಾ ನೀತಿಯು ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅತ್ಯಂತ ಪ್ರಗತಿಪರ ಕೈಗಾರಿಕಾ ನೀತಿ ಎಂದೇ ಅದು ಜನಪ್ರಿಯವಾಗಿತ್ತು. ಅದೇ ರೀತಿ ಈಗಲೂ ನಮ್ಮ ಸರ್ಕಾರ ಹೊಸ ನೀತಿ ಜಾರಿ ತರಲಿದೆ. ರಫ್ತುದಾರರು ಸೇರಿದಂತೆ ಉದ್ಯಮಿಗಳ ಜತೆ ಚರ್ಚಿಸಿ ಹೊಸ ನೀತಿ ಬಿಡುಗಡೆ ಮಾಡಲಿದ್ದೇವೆ. ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲರೂ ಈ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ,”ಎಂದು ಅವರು ಹೇಳಿದರು.
“ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 1992-1993ರಿಂದ ಅತ್ಯುತ್ತಮ ರಫ್ತುದಾರರಿಗೆ ರಾಜ್ಯ ಮಟ್ಟದ “ರಫ್ತು ಶ್ರೇಷ್ಠ ಪ್ರಶಸ್ತಿಗಳನ್ನು” ನೀಡುವ ಪರಿಪಾಠವನ್ನು ಪಾಲಿಸಿಕೊಂಡು ಬರುತ್ತಿದೆ. ಇವರ ಸಾಧನೆ ಇತರರಿಗೆ ಸ್ಪೂರ್ತಿ. ರಫ್ತಿನಲ್ಲಿ ಕರ್ನಾಟಕ ಈಗ ಮೂರನೇ ಸ್ಥಾನದಲ್ಲಿದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುವ ಮೂಲಕ ರಾಜ್ಯವನ್ನು ಮೊದಲ ಸ್ಥಾನಕ್ಕೆ ತರೋಣ,” ಎಂದರು.
“ಕೈಗಾರಿಕೆಗಳ ಉತ್ತೇಜನಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ಕೈಗಾರಿಕೆ ಬೆಳೆದರೆ ನಿರುದ್ಯೋಗ ಸಮಸ್ಯೆ ನೀಗುವುದು. ಇದರಿಂದ ಆರ್ಥಿಕ ಬೆಳವಣಿಗೆಯಾಗುವುದು. ಕೈಗಾರಿಕೆಗಳಿಗೆ ಬೇಕಿರುವುದು ನುರಿತ ಕೆಲಸಗಾರರು. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ ಕೌಶಲ ಇಲಾಖೆ ಮೂಲಕ ಯುವಜನರಿಗೆ ತರಬೇತಿ ನೀಡಿ, ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಒದಗಿಸುತ್ತೇವೆ,” ಎಂದು ಭರವಸೆ ನೀಡಿದರು.
2-3 ಹಂತದ ನಗರಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, “ಶಿಕ್ಷಣ, ಐಟಿ ಮತ್ತು ಸಂಸ್ಕೃತಿಯಲ್ಲಿ ನಾವು ಅಗ್ರ ಸ್ಥಾನದಲ್ಲಿದ್ದೇವೆ. ಅತ್ಯುತ್ತಮ ದರ್ಜೆಯ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ವಿಶ್ವದ ಜತೆಗೆ ಸ್ಪರ್ಧೆ ಮಾಡುವ ಮಟ್ಟದಲ್ಲಿದ್ದೇವೆ. ಹಾಗಾಗಿ ಬಂಡವಾಳ ಹೂಡಿಕೆ ವಿಚಾರಕ್ಕೆ ಬಂದಾಗ ವಿಶ್ವ ನಾಯಕರ ಆಯ್ಕೆ ಕರ್ನಾಟಕ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ” ಎಂದರು.
“ನಮ್ಮ ಪ್ರಣಾಳಿಕೆಯಲ್ಲಿರುವಂತೆ ಉದ್ಯೋಗ ಸೃಷ್ಟಿಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ಆದರೆ, ಎಲ್ಲವೂ ಬೆಂಗಳೂರು ಕೇಂದ್ರಿತವಾಗದಂತೆಯೂ ನೋಡಿಕೊಳ್ಳಬೇಕಿದೆ. ರಾಜ್ಯದ 2-3 ಹಂತದ ನಗರಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವವರಿಗೆ ಪ್ರೋತ್ಸಾಹ ಹೆಚ್ಚು ನೀಡುತ್ತೇವೆ. ಈ ಮೂಲಕ ಬೆಂಗಳೂರಿನ ಮೇಲಿನ ಹೊರೆ ತಗ್ಗಿಸುತ್ತೇವೆ. ರಫ್ತುದಾರರು ಸೇರಿದಂತೆ ಹೂಡಿಕೆದಾರರಿಗೆ ಎಲ್ಲ ರೀತಿಯ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧ,”ಎಂದು ಭರವಸೆ ನೀಡಿದರು.
ಏಕಗವಾಕ್ಷಿ ಯೋಜನೆ ನಿಜವಾದ ಅರ್ಥದಲ್ಲಿ ಜಾರಿ
“ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ನೀಡಿರುವ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿ ಇಂದು ಕರ್ನಾಟಕದಲ್ಲಿ ಫಾಕ್ಸ್‌ಕಾನ್, ಲೀಥಿಯಂ ಕೋಶಗಳ ತಯಾರಿಕೆಗೆ ಹೆಸರುವಾಸಿಯಾಗಿರುವ ಐಬಿಸಿ ಮುಂತಾದ ಕಂಪನಿಗಳು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಮುಂದಾಗಿವೆ,”ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ತಿಳಿಸಿದರು.
“ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಪೂರಕವಾದ ಕ್ರಮಗಳನ್ನು ವಹಿಸಲಾಗುವುದು. ಏಕಗವಾಕ್ಷಿ ಯೋಜನೆ ನಿಜವಾದ ಅರ್ಥದಲ್ಲಿ ಜಾರಿ ತರುತ್ತೇವೆ. ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜಿಸಲು ಆಯ್ದ ಏಳು ವಲಯಗಳಲ್ಲಿ ವಿಷನ್ ಗ್ರೂಪ್‍ಗಳನ್ನು ರಚಿಸಲಾಗುವುದು. ಎಂಎಸ್‌ಎಂಇಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಟಾಟಾ ಟೆಕ್ನಾಲಜಿ ಜತೆ ಕೆಲಸ ಮಾಡಲಿದ್ದೇವೆ,” ಎಂದು ಅವರು ಹೇಳಿದರು.
“ನೀತಿ ಆಯೋಗ ಇದೇ ಜುಲೈ 17ರಂದು ಪ್ರಕಟಿಸಿರುವ ರಫ್ತು ಸನ್ನದ್ಧತೆಯ ಸೂಚ್ಯಂಕ(ಇಪಿಐ)ದಲ್ಲಿ ನೀತಿ ನಿರೂಪಣೆ ಹಾಗೂ ಬಿಸಿನೆಸ್ ಇಕೋ ಸಿಸ್ಟಮ್ ಪಿ ಎಂಬ ಎರಡು ವಿಭಾಗಗಳಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರ ಶ್ರೇಯಾಂಕ ಪಡೆದಿದೆ. ಉತ್ತಮ ಮೂಲಸೌಕರ್ಯ, ಉತ್ತಮ ಸಂಪರ್ಕ ಜಾಲ ಮತ್ತು ಪಾರದರ್ಶಕ ಪರಿಸರ ವ್ಯವಸ್ಥೆಯನ್ನು ಪರಿಗಣಿಸಿ 2022ರಲ್ಲಿ ಲಾಜಿಸ್ಟಿಕ್ಸ್ ವಲಯಕ್ಕೆ ಸಂಬಂಧಿಸಿದಂತೆ ನೀತಿ ಆಯೋಗ ನೀಡುವ ‘ಲೀಡ್ಸ್ ಶ್ರೇಯಾಂಕ’ದಲ್ಲಿ ರಾಜ್ಯವು ‘ಸಾಧಕ’ ಸ್ಥಾನಮಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯ,” ಎಂದರು.
ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ಗೋವಿಂದ ರಾಜು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು.