Tuesday, March 31, 2026
Google search engine

Homeರಾಜ್ಯಏಪ್ರಿಲ್ 1ರಿಂದ ಹೊಸ ನಿಯಮಗಳು : ವಿದ್ಯುತ್, ನೀರು, ಟೋಲ್ ದರ ಏರಿಕೆ ನಾಳೆಯಿಂದ ಜಾರಿ

ಏಪ್ರಿಲ್ 1ರಿಂದ ಹೊಸ ನಿಯಮಗಳು : ವಿದ್ಯುತ್, ನೀರು, ಟೋಲ್ ದರ ಏರಿಕೆ ನಾಳೆಯಿಂದ ಜಾರಿ

ಬೆಂಗಳೂರು : ನಾಳೆ (ಏ.1) ಹೊಸ ಆರ್ಥಿಕ ವರ್ಷದ ಆರಂಭವಾಗುವ ದಿನ. ನಾಳೆಯಿಂದ ಜನರ ಜೀವನವೂ ದುಬಾರಿಯಾಗಲಿದೆ. ಹೊಸ ಆರ್ಥಿಕ ವರ್ಷದ ಮೊದಲ ದಿನದಿಂದಲೇ ವಿದ್ಯುತ್, ಟೋಲ್ ಹಾಗೂ ಬೆಂಗಳೂರು ನಗರದಲ್ಲಿ ನೀರಿನ ದರ ಏರಿಕೆಯಾಗಲಿದೆ. ಈ ಮೂಲಕ ಗ್ರಾಹಕರಿಗೆ ದರ ಏರಿಕೆಯ ನೇರ ಪರಿಣಾಮ ಬೀರಲಿದೆ.

ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಲಿದ್ದು, ಕಾರುಗಳಿಗೆ 5ರಿಂದ 10 ರೂ. ಟೋಲ್ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆಯ ವಾಹನಗಳಿಗೆ 15ರಿಂದ 40 ರೂ. ಅಧಿಕ ಪಾವತಿಸಬೇಕಾಗುತ್ತದೆ. ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಹೆಚ್‌ಎಐ ತನ್ನ ವಾರ್ಷಿಕ ಪಾಸ್ ದರವನ್ನು 2026-27ನೇ ಸಾಲಿಗೆ 75 ರೂ. ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ಇದು ಕೂಡ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ವಾರ್ಷಿಕ ಪಾಸ್ ದರವು 3,000 ರೂ. ಇದ್ದುದು 3,075 ರೂ.ಗೆ ಏರಿಕೆಯಾಗಲಿದೆ.

ನೀರಿನ ದರ ಪರಿಷ್ಕರಣೆ:

ಮತ್ತೊಂದೆಡೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಏ.1ರಿಂದ ಅನ್ವಯವಾಗುವಂತೆ ನೀರಿನ ದರವನ್ನು ಶೇ.3ರಷ್ಟು ಹೆಚ್ಚಳ ಮಾಡಲಿದ್ದು, ಇದರಿಂದ ಬೆಂಗಳೂರಿಗರಿಗೆ ಮತ್ತೊಂದು ಹೊರೆ ಬೀಳಲಿದೆ.

ಇನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಸಾಕಷ್ಟು ಅಳೆದು ತೂಗಿ ಕೊನೆಗೂ ವಿದ್ಯುತ್ ದರವನ್ನು ಪರಿಷ್ಕರಿಸಿದ್ದು, ಮುಂಬರುವ ಹಣಕಾಸು ವರ್ಷದಲ್ಲಿ ಕೈಗಾರಿಕೆಗಳು ಮತ್ತು ವಾಣಿಜ್ಯ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳಿಗೆ (ಎಸ್ಕಾಂ) ಹಿಂದಿನ ಹಣಕಾಸು ವರ್ಷದಲ್ಲಿಆದಾಯ ಖೋತಾ ಆಗಿದ್ದು, ವಿದ್ಯುತ್ ದರ ಹೆಚ್ಚಳದ ಮೂಲಕ ಈ ಆರ್ಥಿಕ ನಷ್ಟ ಸರಿದೂಗಿಸುವಂತೆ ಐದೂ ಎಸ್ಕಾಂಗಳು ಕೆಇಆರ್‌ಸಿಗೆ ಪ್ರಸ್ತಾವ ಸಲ್ಲಿಸಿದ್ದವು. ಅಂತಿಮವಾಗಿ ಎಸ್ಕಾಂಗಳ ಒತ್ತಾಯಕ್ಕೆ ಮಣಿದಿರುವ ಕೆಇಆರ್‌ಸಿ, 2025-26ನೇ ಸಾಲಿಗೆ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಏಪ್ರಿಲ್1ರಿಂದ ಬೇರೇನು ಬದಲಾವಣೆ?

– ಹೋಟೆಲ್, ರೆಸ್ಟೊರೆಂಟ್ ಸೇರಿ ಬಿಲ್ ಪಾವತಿ 1 ಲಕ್ಷ ರೂ. ದಾಟಿದರೆ ಪ್ಯಾನ್ ಕಡ್ಡಾಯ
– ಶೇ.50ರಷ್ಟು ಹೆಚ್‌ಆರ್‌ಎ ಸೌಲಭ್ಯದ ನಗರಗಳ ಪಟ್ಟಿಗೆ ಬೆಂಗಳೂರು ಸೇರಿ ಇನ್ನೂ 4 ನಗರ ಸೇರ್ಪಡೆ
– ರೈಲು ಹೊರಡುವ 8 ಗಂಟೆ ಮೊದಲು ಮುಂಗಡ ಟಿಕೆಟ್ ರದ್ದುಪಡಿಸಿದರೆ ರೀಫಂಡ್ ಸಿಗುವುದಿಲ್ಲ
– ಉದ್ಯೋಗಿಯ ಮೂಲ ವೇತನವು ಅವರ ಒಟ್ಟು ವೇತನದಲ್ಲಿ (ಸಿಟಿಸಿ) ಕನಿಷ್ಠ ಶೇ.50ರಷ್ಟು ಆಗಿರಬೇಕು ಎಂಬ ನಿಯಮದೊಂದಿಗೆ ಹೊಸ ಕಾರ್ಮಿಕ ಸಂಹಿತೆ ಜಾರಿ.
– ಟೋಲ್‌ಗಳಲ್ಲಿ ನಗದು ಪಾವತಿ ಸಂಪೂರ್ಣ ಸ್ಥಗಿತ
– ಹೊಸ ಆದಾಯ ತೆರಿಗೆ ಕಾಯಿದೆ ಜಾರಿ: ಬ್ಯಾಂಕ್‌ಗಳಲ್ಲಿಹಣಕಾಸು ವರ್ಷದಲ್ಲಿ10 ಲಕ್ಷ ರೂ. ಒಳಗಿನ ಹಣ ಠೇವಣಿಗೆ ಪ್ಯಾನ್ ನಮೂದಿಸುವ ಅಗತ್ಯವಿಲ್ಲ.

RELATED ARTICLES
- Advertisment -
Google search engine

Most Popular