ಬೆಂಗಳೂರು : ಕಳೆದ 12 ದಿನಗಳಲ್ಲಿ ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ ತಂತ್ರಜ್ಞಾನ ಆಧಾರಿತ ತ್ವರಿತ ರಕ್ಷಣಾ ಕಾರ್ಯಾಚರಣೆ ನಡೆಸಿ ಕಾಣೆಯಾಗಿದ್ದ ಮತ್ತು ನಿರ್ಲಕ್ಷ್ಯವಾಗಿ ಉಳಿದಿದ್ದ ಹಲವು ಮಕ್ಕಳನ್ನು ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ ಕುಟುಂಬಗಳಿಗೆ ಸುರಕ್ಷಿತವಾಗಿ ಒಪ್ಪಿಸುವ ಕೆಲಸವನ್ನು ಬೆಂಗಳೂರು ಪೊಲೀಸರು ಮಾಡಿದ್ದಾರೆ.
ಇನ್ನೂ ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಸ್ವತಃ ಇಲಾಖೆಯೇ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಸೇಫ್ ಸಿಟಿ ಯೋಜನೆ ಹಾಗೂ ನಮ್ಮ-112 ತುರ್ತು ವ್ಯವಸ್ಥೆಯ ಮೂಲಕ ಈ ಕಾರ್ಯಾಚರಣೆ ನಡೆಸಲಾಗಿದೆ. ಇದರಿಂದ ಜಿಪಿಎಸ್ ಆಧಾರಿತ ಪೇಟ್ರೋಲ್ ವಾಹನಗಳ ನಿಯೋಜನೆ ಹಾಗೂ ನಿಯಂತ್ರಣ ಕೊಠಡಿ ಮತ್ತು ಸ್ಥಳೀಯ ಸಿಬ್ಬಂದಿ ನಡುವೆ ಸಮನ್ವಯ ಸಾಧ್ಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಇನ್ನೂ ನಿಯಂತ್ರಣ ಕೊಠಡಿ ಮತ್ತು ಕ್ಷೇತ್ರದಲ್ಲಿರುವ ಸಿಬ್ಬಂದಿ ನಡುವಿನ ಸಮನ್ವಯ ಈ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ನಗರದಲ್ಲಿ ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆಗೆ ನೀಡಿರುವ ಮಹತ್ವವನ್ನು ಇದು ಸಾಬೀತು ಮಾಡಿದೆ ಎಂದು ತಿಳಿಸಲಾಗಿದೆ.
ಮೊದಲ ಘಟನೆ 2025ರ ಡಿಸೆಂಬರ್ 27ರಂದು ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಮಾನಸಿಕವಾಗಿ ಅಸ್ಥಿರಳಾಗಿದ್ದ ಮಹಿಳೆಯೊಬ್ಬರು ಎರಡು ವರ್ಷದ ಮಗುವನ್ನು ಕರೆದೊಯ್ಯಲು ಯತ್ನಿಸಿದ್ದರು. ಘಟನೆಯನ್ನು ಗಮನಿಸಿದ ಸಹಾಯಕ ಉಪನಿರೀಕ್ಷಕರು ತಕ್ಷಣ ನಮ್ಮ-112ಗೆ ಮಾಹಿತಿ ನೀಡಿದ್ದು, ಐದು ನಿಮಿಷಗಳೊಳಗೆ ಹೋಯ್ಸಳಾ ಪೇಟ್ರೋಲ್ ವಾಹನ ಸ್ಥಳಕ್ಕೆ ತಲುಪಿ ಮಗುವನ್ನು ಸುರಕ್ಷಿತವಾಗಿ ತಾಯಿಗೆ ಒಪ್ಪಿಸಿದರು.
ಅದೇ ರಾತ್ರಿ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ 16 ವರ್ಷದ ಮಾನಸಿಕವಾಗಿ ಸವಾಲುಗಳನ್ನು ಎದುರಿಸುತ್ತಿದ್ದ ಬಾಲಕನನ್ನು ತುರ್ತು ಕರೆ ಬಂದ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ ತಾಯಿಯೊಂದಿಗೆ ಮರಳಿ ಸೇರಿಸಿದ್ದಾರೆ. ಬೆಳ್ಳಂದೂರು, ರಾಜಗೋಪಾಲನಗರ, ಕಾಡುಗೋಡಿ ಹಾಗೂ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಂಟಿಯಾಗಿ ಕಂಡುಬಂದ ಮಕ್ಕಳನ್ನು ಪತ್ತೆಹಚ್ಚಿ ಅವರ ಕುಟುಂಬಗಳಿಗೆ ಸುರಕ್ಷಿತವಾಗಿ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 14ರಂದು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರಹಳ್ಳಿ ಫ್ಲೈಓವರ್ ಸಮೀಪ ನಡೆದಿದ್ದು, ಗದ್ದಲ ಭರಿತ ರಸ್ತೆಯಲ್ಲಿ ಒಂದು ಮಗುವಿನ ಓಡಾಟ ಗಮನಕ್ಕೆ ಬಂದಿದೆ. ನಾಲ್ಕು ನಿಮಿಷಗಳೊಳಗೆ ಸ್ಥಳ ತಲುಪಿದ ಪೊಲೀಸ್ ಸಿಬ್ಬಂದಿ ಪರಿಶೀಲನೆ ಬಳಿಕ ಮಗುವನ್ನು ಪೋಷಕರಿಗೆ ಒಪ್ಪಿಸಿದೆ. ಈ ಎಲ್ಲ ಘಟನೆಗಳಲ್ಲಿಯೂ ಪೊಲೀಸರ ಪ್ರತಿಕ್ರಿಯೆಯ ಸಮಯ 20 ನಿಮಿಷಗಳ ಒಳಗಿತ್ತು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.



