ತುಮಕೂರು: ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇದೇ 12ರಿಂದ ಬೆಂಗಳೂರಿನಿಂದ ಹೊಸ ರೈಲು ಸಂಚರಿಸಲಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಬುಧವಾರ ಘೋಷಣೆ ಮಾಡಿದರು.
ತುಮಕೂರಿನಲ್ಲಿ ರೈಲ್ವೆ ಗೇಟ್ ಮೇಲ್ಸತುವೆಗೆ ಗುದ್ದಲಿ ಪೂಜೆ ನಡೆಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ರೈಲ್ವೆ ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿ ಮಹತ್ವದ ಮಾಹಿತಿ ಹಂಚಿಕೊಂಡರು. ಇದೇ 12 ರಂದು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಒಂದು ಹೊಸ ರೈಲು ಬಿಡುತ್ತಿದ್ದೇವೆ. ದಿನಕ್ಕೆ ನಾಲ್ಕು ಬಾರಿ ಹೋಗಿ ಬರುವಂತಹ ಕೆಲಸ ಆಗಲಿದೆ ಎಂದು ಅವರು ಹೇಳಿದರು.
23 ಕಾಮಗಾರಿಗಳ ಪೈಕಿ ಈಗಾಗಲೇ 10 ಕಾಮಗಾರಿಗೆ ಚಾಲನೆ ಕೊಡಲಾಗಿದೆ. ಹಂತ ಹಂತವಾಗಿ ಕೆಲಸಗಳನ್ನು ಪ್ರಾರಂಭ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಬಂದ ಮೇಲೆ ರೈಲ್ವೆ ಇಲಾಖೆಗೆ ಒಂದು ಕಾಯಕಲ್ಪ ಕೊಟ್ಟಿದ್ದಾರೆ ಎಂದು ಹೇಳಿದರು. ಕರ್ನಾಟಕದಲ್ಲಿ ಇದ್ದತಂಹ 33 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳನ್ನ ನಾವು (ಕೇಂದ್ರ ಸರ್ಕಾರ) ಕೈಗೆತ್ತಿಕೊಂಡಿದ್ದೇವೆ.
ಇದೇ 11 ರಂದು ಹಾವೇರಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿಗೆ ಚಾಲನೆ ಕೊಡುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ಗದಗ, ವಾಡಿ, ಕುಷ್ಠಗಿ, ಯಲಬುರ್ಗಾ ರೈಲು ಸಂಚಾರ ಲೋಕಾರ್ಪಣೆ ಮಾಡುತ್ತೇವೆ. ಅನೇಕ ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡುವಂತಹ ಕೆಲಸ ಈಗಾಗಲೇ ಆಗಿದೆ ಎಂದು ಸೋಮಣ್ಣ ಹೇಳಿದರು.