ಮೈಸೂರು: ಪತ್ರಿಕಾ ವಿತರಕರದು ಶ್ರೇಷ್ಠ ವೃತ್ತಿ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ ಅಭಿಪ್ರಾಯಪಟ್ಟರು.
ನಗರದ ದೇವರಾಜ ಮಾರುಕಟ್ಟೆ ಮುಂಭಾಗ ಚಿಕ್ಕ ಗಡಿಯಾರದ ಬಳಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿದರು.
ಪ್ರತಿನಿತ್ಯ ಮುಂಜಾನೆ ಪತ್ರಿಕಾ ವಿತರಣೆ ಮಾಡುವ ಮೂಲಕ ಶ್ರೇಷ್ಠ ಕಾಯಕ ಮಾಡುತ್ತಿದ್ದೀರಿ. ಕೆಲವರಿಗೆ ನಿತ್ಯದ ದಿನಚರಿ ಆರಂಭವಾಗುವುದೇ ಪತ್ರಿಕೆಗಳನ್ನು ಓದುವುದರ ಮುಖಾಂತರ. ಹಾಗಾಗಿ ಮುಂಜಾನೆ ತಪ್ಪದೆ ಓದುಗರಿಗೆ ಪತ್ರಿಕೆ ವಿತರಿಸುವುದು ಶ್ಲಾಘನೀಯ ಕಾರ್ಯ. ತಮ್ಮೆಲ್ಲರಿಗೂ ವಿಶ್ವ ಪತ್ರಿಕಾ ವಿತರಕರ ದಿನದ ಶುಭಾಷಯಗಳು ಎಂದು ಹೇಳಿದರು. ನಂತರ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮಾತನಾಡಿ, ಈ ದಿನಮಾನದಲ್ಲಿ ಸಾಮಾಜಿಕ ಜಾಣಗಳು ಎಷ್ಟೇ ಪ್ರಬಲವಾಗಿದ್ದರೂ ಇಂದಿಗೂ ಸಹ ಪತ್ರಿಕೆಗಳು ಮಹತ್ವ ಉಳಿಸಿಕೊಂಡಿವೆ. ಮುದ್ರಣ ಮಾಧ್ಯಮದ ನಂಬಿಕೆ ಮತ್ತು ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.
ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮುಂಜಾನೆ ಪಕ್ಷಿಗಳ ಕಲರವದಷ್ಟೇ ವೇಗವಾಗಿ ಪತ್ರಿಕಾ ವಿತರಕರು ತಮ್ಮ ವಿತರಣಾ ಕಾರ್ಯವನ್ನು ಪೂರ್ಣಗೊಳಿಸಿ ಸಮಾಜಕ್ಕ ವಿಶಿಷ್ಠ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ಸಹ ಚಿಕ್ಕಂದಿನಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ವಿತರಣೆ ಮಾಡುತ್ತಾ ದೇಶದ ಅತ್ಯುನ್ನತ ಸ್ಥಾನಕ್ಕೇರಿದರು. ಹಾಗಾಗಿ ಪತ್ರಿಕಾ ವಿತರಕರ ಸೇವೆ ಸ್ತುತ್ಯಾರ್ಹವಾದುದು ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಮಾತನಾಡಿ, ಪತ್ರಿಕಾ ವಿತರಕರು ಇತ್ತೀಚೆಗಷ್ಟೆ ನಗರದಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆಸಿ ತಮ್ಮ ದು:ಖ ದುಮ್ಮಾನವನ್ನು ಸರ್ಕಾರದೆದುರು ತೆರೆದಿಟ್ಟಿದ್ದಾರೆ. ಅವರ ಬೇಡಿಕೆಗಳನ್ನು ಸರಕಾರ ಈಡೇರಿಸುವ ಭರವಸೆ ಇದೆ ಎಂದು ಹೇಳಿದರು.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಣ ಜೆ.ಎಸ್. ಹೋಮದೇವ, ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ. ಹೆಗಡೆ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ಕೆಯುಡಬ್ಲುಜೆ ರಾಜ್ಯ ಸಮಿತಿ ಸದಸ್ಯ ಬಿ. ರಾಘವೇಂದ್ರ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಎಂ. ನಾಗರಾಜು, ಪ್ರಧಾನ ಕಾರ್ಯದರ್ಶಿ ಸಿ. ಶಿವಣ್ಣ, ಸಹ ಕಾರ್ಯದರ್ಶಿ ಎಸ್ ಚಿನ್ನರಾಜು, ಖಜಾಂಚಿ ಸಿ.ಡಿ. ಹರೀಶ್, ಸಂಘಟನಾ ಕಾರ್ಯದರ್ಶಿ ಆರ್. ಶಿವಕುಮಾರ್, ಕಾರ್ಯದರ್ಶಿ ಶ್ರೀಕಾಂತ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿತರಕ ಜವರಪ್ಪ, ನಿರ್ದೇಶಕರಾದ ಪಿ.ಕೆ. ಸತೀಶ್ ಬಾಬು, ಎ.ಆರ್. ಪ್ರಭಾಕರ್ ರಾವ್, ಡಿ. ಹೇಮಂತ್ ಕುಮಾರ್, ಎಂ. ಶಿವಲಿಂಗ, ಎನ್. ನಂಜುಂಡಯ್ಯ ಇದ್ದರು.