ಮಹಾರಾಷ್ಟ್ರ : ನಕಲಿ ನೋಟು ತಯಾರಿಸುವ ಜಾಲದ ಮೇಲೆ ಎನ್‌ಐಎ ಅಧಿಕಾರಿಗಳು ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೆಂಗಳೂರು, ಬಳ್ಳಾರಿಯಲ್ಲಿಯೂ ದಾಳಿ ನಡೆಸಿದ್ದು, ಪ್ರಮುಖ ಆರೋಪಿ ರಾಹುಲ್ ತಾನಾಜಿ ಎಂಬಾತನನ್ನು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲೂ ಎನ್‌ಐಎ ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಮಹೇಂದರ್ ಬಂಧಿತ ಆರೋಪಿ.
ನಕಲಿ ನೋಟು ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವನಿತಾ ಎಂಬುವವರಿಗೆ ಸೆ. ೧೬ ರಂದು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ೬ ವರ್ಷ ಜೈಲುಶಿಕ್ಷೆ ಜೊತೆಗೆ ೨೦,೦೦೦ ದಂಡ ವಿಧಿಸಿತ್ತು. ೨೦೧೮ರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ರಾಜ್ಯಕ್ಕೆ ಖೋಟಾ ನೋಟು ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಎನ್‌ಐಎ, ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಕರ್ನಾಟಕದಲ್ಲಿ ಇದೀಗ ನಕಲಿ ನೋಟುಗಳ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಂತೆ ಇತ್ತೀಚೆಗೆ ೧೦೦ ಮುಖಬೆಲೆಯ ಒಟ್ಟು ೩೦ ನಕಲಿ ನೋಟುಗಳು ಉಡುಪಿ, ಮಣಿಪಾಲ, ಹುಬ್ಬಳ್ಳಿ ಹಾಗೂ ಮಲ್ಲೇಶ್ವರ ಬ್ರಾಂಚ್ ನ ಬ್ಯಾಂಕ್‌ಗಳಲ್ಲಿ ಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ ೪ ಎಫ್ಐಆರ್ಗಳು ದಾಖಲಾಗಿದ್ದು, ಆರ್ ಬಿಐಗೆ ರಿಮೀಟ್ ಮಾಡುವ ಸಂದರ್ಭದಲ್ಲಿ ಈ ನಕಲಿ ನೋಟುಗಳು ಬೆಳಕಿಗೆ ಬಂದಿದ್ದವು. ಇದೀಗ ನೋಟು ಪ್ರಿಂಟ್ ಮಾಡುವ ಜಾಲ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.