ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧವನ್ನು ಮುಂದುವರಿಸಲು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆಗ್ರಹಿಸಿದ್ದಾರೆ. ಈ ನಿರ್ಬಂಧವನ್ನು ತೆರವುಗೊಳಿಸಬಾರದು, ಅದು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಮಾರಕವಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಇಂದು ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಈ ಪ್ರದೇಶದ ಜೈವಿಕ ವೈವಿಧ್ಯತೆ ಸಂರಕ್ಷಿಸುವುದು ಅತ್ಯಂತ ಅವಶ್ಯಕ. ಈಗಾಗಲೇ ಬೆಳಿಗ್ಗೆ ಗಂಟೆ 6 ರಿಂದ ರಾತ್ರಿ 9ರವರೆಗೆ ವಾಹನ ಸಂಚಾರಕ್ಕೆ ಅವಕಾಶವಿದೆ. ರಾತ್ರಿ 9 ನಂತರ ವಾಹನ ಸಂಚಾರ ಅಗತ್ಯವೇ ಇಲ್ಲ. ಇಂತಹ ಸಮಯದಲ್ಲಿ ವಾಹನಗಳನ್ನು ಚಾಲನೆ ಮಾಡಲು ಅವಕಾಶ ನೀಡುವುದು ವನ್ಯಜೀವಿಗಳ ಶಾಂತಿಯನ್ನು ಭಂಗಗೊಳಿಸುತ್ತದೆ ಮತ್ತು ಅವರ ಸಂಚಾರ ಮಾರ್ಗಗಳಿಗೆ ತೊಂದರೆಯಾದೀತು,” ಎಂದು ಹೇಳಿದರು.
ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದರು. “ರಾತ್ರಿ ಸಮಯದಲ್ಲಿ ಪ್ರಾಣಿಗಳು ಹೆಚ್ಚು ಚಟುವಟಿಕೆ ನಡೆಸುವ ಸಮಯವಾಗಿದ್ದು, ಅವುಗಳಿಗೆ ಮಾನವ ಹಸ್ತಕ್ಷೇಪ ಕಡಿಮೆ ಇರಬೇಕಾಗಿದೆ,” ಎಂದು ಹೇಳಿದರು.
ಎಸ್‌ಪಿಐ ಕಚೇರಿ ಸಮೀಪ ಮರಗಳ ಹನನ: ಬೇಸರ ವ್ಯಕ್ತಪಡಿಸಿದ ಒಡೆಯರ್
ಪತ್ರಿಕಾಗೋಷ್ಠಿಯ ಮತ್ತೊಂದು ಭಾಗದಲ್ಲಿ, ಮೈಸೂರಿನ ಎಸ್‌ಪಿ ಕಚೇರಿ ಬಳಿ ಬೃಹದಾಕಾರದ ಮರಗಳನ್ನು ರಾತ್ರೋರಾತ್ರಿ ಕಡಿದಿರುವುದರ ಕುರಿತು ಪ್ರಮೋದಾದೇವಿ ಒಡೆಯರ್ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಒಂದು ಮರವನ್ನು ಬೆಳೆಸಲು ವರ್ಷಗಳ ಕಾಲ ಶ್ರಮ ಬೇಕು. ಇತ್ತೀಚೆಗಿನ ಪರಿಸರ ನಾಶದಿಂದಾಗಿಯೇ ನಮಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ರಸ್ತೆಯ ಅಗಲೀಕರಣ ನೆಪದಲ್ಲಿ ಈ ರೀತಿಯ ಕ್ರಮವನ್ನ ತೆಗೆದುಕೊಳ್ಳುವುದು ಸರಿಯಲ್ಲ. ಪರಿಸರದೊಂದಿಗೆ ಸಮತೋಲನ ಕಾಯ್ದುಕೊಳ್ಳಬೇಕು,” ಎಂದು ಹೇಳಿದ್ದಾರೆ.