ಪಾಟ್ನಾ : ಹಿಜಾಬ್ ಸಂಬಂಧಿತ ವಿವಾದದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಧಿಕೃತ ಮೂಲಗಳ ಪ್ರಕಾರ, ಘಟನೆಯ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಗಳು ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡ ನಂತರ ಅವರ ಭದ್ರತೆಯನ್ನು ಬಲಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಷಯವು ರಾಜಕೀಯ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ. ವಿರೋಧ ಪಕ್ಷದ ನಾಯಕರು ಈ ಘಟನೆಯ ಬಗ್ಗೆ ಮುಖ್ಯಮಂತ್ರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿತೀಶ್ ಕುಮಾರ್ ಅವರು ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವಾಗ ವಿವಾದ ಪ್ರಾರಂಭವಾಯಿತು. ಸಮಾರಂಭದ ವೇಳೆ, ತನ್ನ ನೇಮಕಾತಿ ಪತ್ರವನ್ನು ಸ್ವೀಕರಿಸಲು ಮುಂದೆ ಬಂದ ಮುಸ್ಲಿಂ ಮಹಿಳೆಯ ಹಿಜಾಬ್ ಅನ್ನು ತೆಗೆದುಹಾಕಿದ್ದಾರೆ ಎಂದು ಆರೋಪಿಸಲಾಯಿತು ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಆಕ್ರೋಶಕ್ಕೆ ಕಾರಣವಾಯಿತು.
ಈ ಬಗ್ಗೆ ರಾಷ್ಟ್ರೀಯ ಜನತಾ ದಳ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಯ ಕ್ರಮವನ್ನು ನಾಚಿಕೆಗೇಡಿನ ಮತ್ತು ಸ್ವೀಕಾರಾರ್ಹವಲ್ಲ ಎಂದು ಬಣ್ಣಿಸಿದ್ದಾರೆ. ನಿತೀಶ್ ಕುಮಾರ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ಅವರು, ಈ ಘಟನೆಗೆ ಉತ್ತರದಾಯಿತ್ವ ನೀಡಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಪ್ರತಿಕ್ರಿಯೆಗಳು ಹೆಚ್ಚುತ್ತಿದ್ದಂತೆ, ಅಧಿಕಾರಿಗಳು ಮುಖ್ಯಮಂತ್ರಿಗಳ ಭದ್ರತಾ ವ್ಯವಸ್ಥೆಗಳನ್ನು ಮರು ಮೌಲ್ಯಮಾಪನ ಮಾಡಲು ತ್ವರಿತವಾಗಿ ಮುಂದಾದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಕುಮಾರ್ ಅವರಿಗೆ ಪಾಕಿಸ್ತಾನದಿಂದ ಬೆದರಿಕೆ ಬಂದಿದ್ದು, ಪಾಕಿಸ್ತಾನದ ಡಾನ್ ಶೆಹಜಾದ್ ಭಟ್ಟಿ ಅವರು ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಆದಾಗಿಯೂ, ವರ್ಧಿತ ಭದ್ರತಾ ಕ್ರಮಗಳ ನಿರ್ದಿಷ್ಟ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಬೆದರಿಕೆಯ ನಂತರ, ಬಿಹಾರ ಪೊಲೀಸ್ ಮಹಾನಿರ್ದೇಶಕರು ಶೆಹಜಾದ್ ಭಟ್ಟಿಗೆ ಸಂಬಂಧಿಸಿದ ವಿಡಿಯೊವನ್ನು ವಿವರವಾಗಿ ಪರಿಶೀಲಿಸಲು ಆದೇಶಿಸಿದ್ದು, ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



