Friday, April 4, 2025
Google search engine

Homeಅಪರಾಧಕಾನೂನುಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

ಬೆಂಗಳೂರು: ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥ ಎಂ. ಚಂದ್ರಶೇಖರ್‌ ನೀಡಿರುವ ದೂರಿನ ಸಂಬಂಧ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಯಾವುದೇ ಆತುರದ ಕ್ರಮಕ್ಕೆ ಮುಂದಾಗಬಾರದು ಎಂದು ಪೊಲೀಸರಿಗೆ ಹೈಕೋರ್ಟ್‌ ಸೂಚಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜತೆಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಎಂ. ಚಂದ್ರಶೇಖರ್‌ ದೂರು ಆಧರಿಸಿ ಸಂಜಯನಗರ ಪೊಲೀಸರು ದಾಖಲಿಸಿರುವ ಎಫ್ಐಆರ್‌ ರದ್ದುಪಡಿಸುವಂತೆ ಕೋರಿ ಎಚ್‌.ಡಿ. ಕುಮಾರಸ್ವಾಮಿ, ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಶಾಸಕ ಸುರೇಶ್‌ ಬಾಬು ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ಬುಧವಾರ ಸಂಜೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಆತುರದ ಅಥವಾ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ನೀಡಿರುವ ಭರವಸೆಯನ್ನು ದಾಖಲಿಸಿಕೊಂಡಿತು. ಅದರಂತೆ, ಮುಂದಿನ ವಿಚಾರಣೆವರೆಗೆ ದೂರು ಆಧರಿಸಿ ಅರ್ಜಿದಾರರ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.

ನಿರೀಕ್ಷಣ ಜಾಮೀನು ರದ್ದುಪಡಿಸುವ ಪ್ರಕ್ರಿಯೆಗೆ ಸರಕಾರ ಮುಂದಾಗಬಾರದು ಎಂದು ನ್ಯಾಯಪೀಠ ಸೂಚಿಸಿತು. ಪ್ರಕರಣಕ್ಕೆ ತಡೆ ನೀಡಬೇಕು ಎಂಬ ಅರ್ಜಿದಾರರ ಪರ ವಕೀಲರ ಮನವಿಯನ್ನು ತಳ್ಳಿಹಾಕಿದ ನ್ಯಾಯಪೀಠ, ಬಲವಂತದ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಹೆಚ್ಚುವರಿ ಎಸ್‌ಪಿಪಿ ಭರವಸೆ ನೀಡಿದ್ದಾರೆ. ನ್ಯಾಯಾಲಯ ಸಹ ಆತುರದ ಕ್ರಮ ಬೇಡ ಎಂದು ಹೇಳಿದೆ.

ನಿರೀಕ್ಷಣ ಜಾಮೀನು ರದ್ದು ವಿಚಾರವಾಗಿಯೂ ಹೇಳಿದೆ. ಹೀಗಿದ್ದಾಗ ಏನೂ ಆಗಲ್ಲ. ಒಂದೊಮ್ಮೆ ನ್ಯಾಯಾಲಯಕ್ಕೆ ಕೊಟ್ಟ ಭರವಸೆ ಮೀರಿ ಪ್ರಾಸಿಕ್ಯೂಶನ್‌ ಏನೇ ಮುಂದಡಿ ಇಟ್ಟರೆ, ವಿಚಾರಣೆಗೆ ಒಂದೇ ಒಂದು ನೋಟಿಸ್‌ ಕೊಟ್ಟರೆ, ತತ್‌ಕ್ಷಣ ನೀವು ನ್ಯಾಯಾಲಯದ ಕದ ತಟ್ಟಬಹುದು ಎಂದು ಹೇಳಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

RELATED ARTICLES
- Advertisment -
Google search engine

Most Popular