ಮೈಸೂರು: ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೃತಪಟ್ಟವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಡಿ.25ರಂದು ಅರಮನೆಯ ಮುಂಭಾಗ ಹೀಲಿಯಂ ಗ್ಯಾಸ್ ಬ್ಲಾಸ್ಟ್ ಆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದರು. ಈ ಸ್ಫೋಟ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆ ಮೃತರ ಕುಟುಂಬಕ್ಕೆ ಇಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೂ ದೇವರಾಜ ಅರಸ್‌ಗೂ ಹೋಲಿಕೆ ಇಲ್ಲ. ಆದರೆ ಇಬ್ಬರು ಒಂದೇ ಜಿಲ್ಲೆಯಿಂದ ಬಂದವರು. ಅವರು ಮುಖ್ಯಮಂತ್ರಿಯಾಗಿ ಆಳಿದ ದಾಖಲೆಯನ್ನ ನಾಳೆ ನಾನು ಮುರಿಯುತ್ತಿದ್ದೇನೆ. ಈ ರೆಕಾರ್ಡ್ ಅನ್ನ ಮತ್ತೆ ಯಾರೂ ಮುರಿಯುವುದಿಲ್ಲ ಎಂದು ನಾನು ಹೇಳಲಾರೆ. ಸಚಿನ್ ತೆಂಡೂಲ್ಕರ್ ರೆಕಾರ್ಡ್ ಅನ್ನು ವಿರಾಟ್ ಕೊಹ್ಲಿ ಮುರಿಯಲಿಲ್ವಾ? ಮುಂದೆ ಯಾರೋ ಬರಬಹುದು. ಈ ರೆಕಾರ್ಡ್ ಅನ್ನ ಬ್ರೇಕ್ ಮಾಡಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸಬಹುದು. ಹೀಗಾಗಿ ನನ್ನ ದಾಖಲೆ ಯಾರೂ ಮುರಿಯಲು ಆಗುವುದಿಲ್ಲ ಎಂದು ನಾನು ಹೇಳುವುದಿಲ್ಲ. ದೇವರಾಜ ಅರಸ್ ಅವರ ಕಾಲದ ರಾಜಕಾರಣವೇ ಬೇರೆ. ಇವತ್ತಿನ ರಾಜಕಾರಣವೇ ಬೇರೆ. ಎಲ್ಲಾ ಸ್ಥಿತಿಗತಿಗಳು ಬೇರೆ ಬೇರೆ ರೀತಿ ಇದೆ. ಅರಸು ಸಮುದಾಯ ಸಂಖ್ಯೆಯಲ್ಲಿ ಮಾತ್ರ ಸಣ್ಣ ಸಮುದಾಯ. ಸಾಮಾಜಿಕವಾಗಿ ಎತ್ತರದಲ್ಲಿರುವ ಸಮುದಾಯ ಅದು. ನನ್ನದು ಸಾಮಾಜಿಕವಾಗಿ ತಳ ಸಮುದಾಯ ಎಂದರು.
ನಾನು ಯಾವತ್ತೂ ಸಿಎಂ ಆಗುತ್ತೇನೆ, ಮಂತ್ರಿ ಆಗುತ್ತೇನೆ ಎಂದುಕೊಂಡಿರಲಿಲ್ಲ. ರೆಕಾರ್ಡ್ ವಿಚಾರ ಬಿಡಿ, ದಾಖಲೆ ವಿಚಾರ ಬಿಡಿ, ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಶಾಸಕನಾಗಬೇಕು ಅಂದುಕೊಂಡಿದ್ದೆ. ಜನರು ಅವತ್ತೇ ದುಡ್ಡು ಹಾಕಿ ನನ್ನನ್ನು ಶಾಸಕನಾಗಿ ಮಾಡಿದರು. ಅದೇ ಜನರ ಆಶೀರ್ವಾದದಿಂದ ಅಲ್ಲಿಂದ ಇಲ್ಲಿತನಕ ಬೆಳೆದಿದ್ದೇನೆ. ಜನರ ಆಶೀರ್ವಾದದಿಂದ ಇದೆಲ್ಲಾ ಆಗಿದ್ದು. ಒಂದು ಸಾವಿರ ದಿನದ ಸಾಧನ ಸಮಾವೇಶ ವಿಚಾರದ ಬಗ್ಗೆ ನನಗೆ ಏನು ಗೊತ್ತಿಲ್ಲ. ಕೃಷ್ಣ ಬೈರೇಗೌಡ ಸಮಾವೇಶ ಮಾಡೋಣ ಎಂದು ಹೇಳಿದ್ದಾನೆ. ಅವರೇ ಅದನ್ನ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಬಳ್ಳಾರಿ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಒಡಿ ತನಿಖೆ ವಹಿಸುವ ಬಗ್ಗೆ ನಾಳೆ ಪರಮೇಶ್ವರ್ ಜೊತೆ ಮಾತನಾಡುತ್ತೇನೆ. ಆ ನಂತರ ಆ ಬಗ್ಗೆ ತೀರ್ಮಾನ ಮಾಡುತ್ತೇವೆ. ಈಗ ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಮ್ಮ ಪೊಲೀಸರ ಕಾರ್ಯದಕ್ಷತೆ ಬಗ್ಗೆ ನಮಗೆ ಅನುಮಾನಗಳಿಲ್ಲ. ಈ ಘಟನೆ ತನಿಖೆ ಮಾಡುವಲ್ಲಿ ಅವರು ನಿಪುಣರಿದ್ದಾರೆ. ಅವರು ತನಿಖೆ ಮಾಡಿ ವರದಿ ಕೊಡಲಿ. ಆ ನಂತರ ಬೇರೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.



