ಬೆಂಗಳೂರು : ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ತನಕ ಉದ್ದೇಶಿತ ಟನಲ್ ರಸ್ತೆ ನಿರ್ಮಾಣದ ವಿಚಾರ ಹಲವು ಪರ-ವಿರೋಧಕ್ಕೆ ಕಾರಣವಾಗಿರುವ ಹೊತ್ತಲ್ಲೇ ಸರ್ಕಾರಕ್ಕೆ ಎಂಜಿನಿಯರ್ಸ್ ತಂಡ ಬೆಂಬಲ ನೀಡಿದೆ. ಟನಲ್ ರಸ್ತೆಯಿಂದ ರಾಜಧಾನಿಯ ಟ್ರಾಫಿಕ್ ದಟ್ಟಣೆ ತಗ್ಗಲಿದೆ ಎಂಬ ವಾದ ಎತ್ತಿಹಿಡಿದಿರುವ ಇನ್ಸ್ಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆ, ಟನಲ್ ರಸ್ತೆಯ ಬಗ್ಗೆ ಕೇಳಿಬರುತ್ತಿದ್ದ ಗೊಂದಲಗಳಿಗೆ ತೆರೆ ಎಳೆಯೋಕೆ ಹೊರಟಿದೆ.
ಸುರಂಗ ರಸ್ತೆಯ ಸಾಧಕ-ಭಾದಕಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಉದ್ದೇಶಿತ ಟನಲ್ ರಸ್ತೆಯ ನಿರ್ಮಾಣದಿಂದ ಮಾತ್ರ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಬಹುದು ಎಂದು ಹೇಳಿರುವ ಎಂಜಿನಿಯರ್ಸ್, ಈ ಬಗ್ಗೆ ಸುದೀರ್ಘ ವರದಿ ತಯಾರಿಸಿ ಸರ್ಕಾರದ ಮುಂದಿಟ್ಟಿದ್ದಾರೆ.
ಟನಲ್ ರಸ್ತೆಯ ನಿರ್ಮಾಣದಿಂದ ಬೇರೆ ಬೇರೆ ರಾಜ್ಯಗಳಲ್ಲಿ ಆಗಿರುವ ಟ್ರಾಫಿಕ್ ನಿಯಂತ್ರಣದ ಜೊತೆಗೆ ಬೆಂಗಳೂರಿನ ಟನಲ್ ರಸ್ತೆಯ ನಿರ್ಮಾಣದಿಂದ ಆಗುವ ಪರಿಣಾಮಗಳ ಬಗ್ಗೆ ವರದಿಯಲ್ಲಿ ಎಂಜಿನಿಯರ್ಸ್ ಉಲ್ಲೇಖಿಸಿದ್ದಾರೆ. ಅಲ್ಲದೆ, ಟನಲ್ ರಸ್ತೆಯ ನಿರ್ಮಾಣದಿಂದ ಸೂಕ್ಷ್ಮ ಪ್ರದೇಶಗಳಿಗಾಗಲೀ, ಲಾಲ್ ಬಾಗ್ ಸೇರಿ ಇನ್ನಾವ ಸಾರ್ವಜನಿಕ ಜಾಗಗಳಿಗೆ ಅಪಾಯ ಇಲ್ಲ ಎಂದಿದ್ದಾರೆ.
ಇತ್ತ ಇದೇ ವಿಚಾರ ಮುಂದಿಟ್ಟುಕೊಂಡು ಟನಲ್ ರಸ್ತೆಯ ವಿರುದ್ಧ ಸಮರ ಸಾರಿದ್ದ ವಿಪಕ್ಷಗಳಿಗೆ ಟಾಂಗ್ ಕೊಟ್ಟಿರುವ ಎಂಜಿನಿಯರ್ಸ್, ಟನಲ್ ರಸ್ತೆ ಮಾಡದಿದ್ದರೆ ರಾಜಧಾನಿ ಡೆಡ್ ಸಿಟಿಯಾಗುತ್ತದೆ. ಟ್ರಾಫಿಕ್ ನಿಯಂತ್ರಣ ಅಸಾಧ್ಯ ಎಂದಿದ್ದಾರೆ.
ಸರ್ಕಾರದ ಮುಂದೆ ಎಂಜಿನಿಯರ್ಸ್ ಸಲ್ಲಿಸಿರುವ ವರದಿಯ ಪ್ರಕಾರ, ಟನಲ್ ರಸ್ತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯೇ ಸೂಚನೆ ನೀಡಿದ್ದರು ಎಂಬ ವಿಚಾರವೂ ಬಯಲಾಗಿದೆ. ಅಲ್ಲದೆ, ಬೆಂಗಳೂರಲ್ಲಿ ಟನಲ್ ರಸ್ತೆಯ ನಿರ್ಮಾಣಕ್ಕೆ ಮೆಟ್ರೋ ಟನಲ್ಗಿಂತ ಕಡಿಮೆ ವೆಚ್ಚ ತಗುಲುತ್ತದೆ ಎಂದು ಸಮರ್ಥನೆ ನೀಡಿದ್ದಾರೆ.
ಟನಲ್ ರಸ್ತೆಯ ನಿರ್ಮಾಣಕ್ಕೆ ಪ್ರತಿ ಕಿಲೋಮೀಟರ್ ಗೆ 446.83 ಕೋಟಿ ರೂ. ವೆಚ್ಚ ಆಗಲಿದೆ ಎಂದು ಅಂದಾಜಿಸಿರುವ ಎಂಜಿನಿಯರ್ಸ್, ಟನಲ್ ಕೊರೆಯುವಾಗ ಜಲಮೂಲಗಳಿಗಾಗಲಿ, ಸಾರ್ವಜನಿಕ ಆಸ್ತಿಗಳಿಗಾಗಲಿ ಹಾನಿಯಾಗಲ್ಲ. ಅಲ್ಲದೇ ಟನಲ್ ರಸ್ತೆಯಿಂದ ಟ್ರಾಫಿಕ್ ದಟ್ಟಣೆಗೆ ಬ್ರೇಕ್ ಬೀಳಲಿದೆ ಎಂದಿದ್ದಾರೆ.
ಟನಲ್ ರಸ್ತೆಯಿಂದ ವಾಹನ ದಟ್ಟಣೆ ನಿಯಂತ್ರಣ ಜೊತೆಗೆ ಸಮಯದ ಉಳಿತಾಯವಾಗಿದೆ. ಟನಲ್ ರಸ್ತೆಯಿಂದ ಮಾಲಿನ್ಯ ಮಟ್ಟ ನಿಯಂತ್ರಣ ಜೊತೆಗೆ ಅಪಘಾತ ಇಳಿಕೆ ನಿರೀಕ್ಷೆಯಿದೆ. ಮೆಟ್ರೋ ನಿರ್ಮಾಣ ದರಕ್ಕಿಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಸಾಧ್ಯತೆಯಿದೆ. ಮುಖ್ಯರಸ್ತೆಗಳಿಗೆ ಶೀಘ್ರವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗಿದೆ. ಪ್ರತಿ ಕಿಲೋಮೀಟರ್ ಗೆ 20 ರೂಪಾಯಿ ಪ್ರಯಾಣ ವೆಚ್ಚವಾಗಿದೆ ಎಂದು ತಿಳಿದಿದೆ.



