Friday, August 1, 2025
Google search engine

Homeರಾಜ್ಯಪ್ರಣವ್ ಮೊಹಾಂತಿಯನ್ನು ಕೇಂದ್ರದ ಸೇವೆಗೆ ಕಳುಹಿಸುವ ತೀರ್ಮಾನ ತೆಗೆದುಕೊಂಡಿಲ್ಲ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಪ್ರಣವ್ ಮೊಹಾಂತಿಯನ್ನು ಕೇಂದ್ರದ ಸೇವೆಗೆ ಕಳುಹಿಸುವ ತೀರ್ಮಾನ ತೆಗೆದುಕೊಂಡಿಲ್ಲ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ಕೇಂದ್ರ ಸರಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಧರ್ಮಸ್ಥಳ ಪ್ರಕರಣದ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿಯವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳನ್ನು ಹುಟ್ಟುಹಾಕಲಾಗುತ್ತಿದೆ. ಡಿಜಿ ಹಂತದ ಅಧಿಕಾರಿಯನ್ನು ಎಸ್ಐಟಿ ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ಸರಕಾರ ತೀರ್ಮಾನ ಮಾಡಿತ್ತು. ಅದರಂತೆ ಪ್ರಣವ್ ಮೊಹಾಂತಿಯವರನ್ನು ನೇಮಿಸಿದ್ದೇವೆ. ಕೇಂದ್ರ ಸರಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಅವರ ಹೆಸರಿದೆ. ಅವರನ್ನು ಕೇಂದ್ರದ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಪೋಸ್ಟಿಂಗ್ಗಳನ್ನು ಮಾಡಲಾಗುತ್ತಿದೆ. ಇದು ಸರಿ ಕಾಣಿಸುವುದಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕು. ಈ ನಿಟ್ಟಿನಲ್ಲಿ ಎಸ್ಐಟಿ ಮಾಡಿದ್ದೇವೆ. ಎಸ್ಐಟಿ ತನಿಖೆ ನಡೆಸಿ, ವರದಿ ಸಲ್ಲಿಸಿದ ನಂತರ ಸತ್ಯಾಸತ್ಯತೆ ಹೊರಬರುತ್ತವೆ. ನಮಗೆ ಬೇಕಿರುವುದು ಅಷ್ಟೆ ಎಂದವರು ಹೇಳಿದರು.

ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಯಾರನ್ನು ರಕ್ಷಣೆ ಮಾಡಬೇಕು, ಯಾರನ್ನೋ ಸಿಕ್ಕಿಹಾಕಿಸಬೇಕು ಎಂಬ ಅಜೆಂಡಾ ಸರಕಾರಕ್ಕೆ ಖಂಡಿತವಾಗಿಯೂ ಇಲ್ಲ. ಯಾರು ಕೂಡ ಅದನ್ನು ತಪ್ಪು ಭಾವನೆಯಿಂದ ನೋಡಬಾರದು. ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂದು ಹೇಳಿದ್ದೇವೆ. ಇದು ಸರಕಾರಕ್ಕೆ ಇರುವ ಅಜೆಂಡಾ ಎಂದು ಹೇಳಿದರು.

ಒಳಮೀಸಲಾತಿ ಕುರಿತಂತೆ ನಾಗಮೋಹನ್ ದಾಸ್ ಸರಕಾರಕ್ಕೆ ವರದಿ ಕೊಡುವ ಮೊದಲು ನಾವು ಚರ್ಚೆ ಮಾಡೋಣ. ಈ ವಿಚಾರದಲ್ಲಿ ಯಾರಿಗೂ ಸಹ ಬೇಸರ ಆಗುವುದು ಬೇಡ. ನಮ್ಮಲ್ಲಿರುವ ಅಭಿಪ್ರಾಯಗಳನ್ನು ಸರಿ ಮಾಡಿಕೊಳ್ಳೋಣ ಎಂಬ ನಿಟ್ಟಿನಲ್ಲಿ ಸಭೆ ಕರೆದಿದ್ದೇನೆ. ಚರ್ಚೆ ನಂತರ ಅಭಿಪ್ರಾಯಗಳು ಗೊತ್ತಾಗಲಿವೆ ಎಂದು ತಿಳಿಸಿದರು.

ಒಳಮೀಸಲಾತಿ ವರದಿ ಪೂರ್ಣವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಸಲ್ಲಿಸಿಲ್ಲ. ಸದ್ಯದಲ್ಲಿ ಸಲ್ಲಿಸುತ್ತೇವೆ ಎಂದಿದ್ದಾರೆ. ಒಳ ಪಂಗಡಗಳ ಬಗ್ಗೆ ಚರ್ಚೆ ಮಾಡಿಕೊಳ್ಳುವುದು ಸೂಕ್ತ. ಒಳಮೀಸಲಾತಿ ಕುರಿತು ಶಾಸಕರು ಮಾತಾಡಿಕೊಳ್ಳುವುದಿಕ್ಕೆ ಯಾರು ಬ್ರೆಕ್ ಹಾಕುವುದಿಲ್ಲ ಎಂದರು.

RELATED ARTICLES
- Advertisment -
Google search engine

Most Popular