Saturday, April 19, 2025
Google search engine

Homeರಾಜ್ಯಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗಿಲ್ಲ:ಕುಮಾರಸ್ವಾಮಿ

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗಿಲ್ಲ:ಕುಮಾರಸ್ವಾಮಿ

ಮೈಸೂರು: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗುತ್ತಿಲ್ಲ. ರಾಜ್ಯವೇ ಅನ್ಯಾಯ ಮಾಡಿಕೊಳ್ಳುತ್ತಿದೆ. ಕೇವಲ ಬೈದಾಡಿಕೊಂಡು ತಿರುಗಾಡುವುದರಿಂದ ಪ್ರಯೋಜನವಾಗಲ್ಲ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮೀಸಲಿಡಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತೆ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮೀಸಲಿಡದೆ, ಕೇಂದ್ರದ ವಿರುದ್ಧ ವಿನಾಕಾರಣ ಆರೋಪ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ಮಾಡಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನ ಕೊಡುಗೆ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್​ ನಾಯಕರು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ​ ನಾಯಕರು ಈ ನಡವಳಿಕೆ ಬದಲಾವಣೆ ಮಾಡಿಕೊಳ್ಳಲಿ. ಮೊದಲು ನಿಮ್ಮ ಸಣ್ಣತನ ಬಿಟ್ಟುಬಿಡಿ. ಕೇಂದ್ರದ ವಿರುದ್ಧ ಸುಮ್ಮನೇ ಆರೋಪ ಮಾಡ್ತಾ ತಿರುಗಾಡುತ್ತಿದ್ದೀರಿ, ನೀವು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು. ಅದು ಬಿಟ್ಟು ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಟಾಂಗ್​ ಕೊಟ್ಟರು.

ಮೇಕೆದಾಟು ಯೋಜನೆಗಾಗಿ ನಾನು ಪ್ರಯತ್ನ ಮಾಡುತ್ತೇನೆ. ಒಂದೇ ರಾತ್ರಿಯಲ್ಲಿ ಮೇಕೆದಾಟು ಯೋಜನೆ ಮಾಡೋಕೆ ಆಗುತ್ತಾ? ಕರ್ನಾಟಕದ ನಾಲ್ಕು ಜಲಾಶಯಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ. ಕರ್ನಾಟಕದವರೇ ಕಟ್ಟಿರುವುದು. ಕಾವೇರಿ ನೀರು ಬಿಡುವ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜತೆ ಚರ್ಚೆ ಮಾಡಿದ್ದೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು. ಈಗ ರಾಜ್ಯದಲ್ಲಿ ಮಳೆಯಾಗಿದ್ದರಿಂದ ಹೆಚ್ಚು ನೀರು ಹೋಗುತ್ತಿದೆ. ಈ ವಿಚಾರಕ್ಕೆ ಟೆಕ್ನಿಕಲ್ ಆಗಿ ಚರ್ಚೆ ಮಾಡಿದರೆ ಒಳ್ಳೆಯದು ಎಂದರು.

ರಾಜ್ಯದ ಯೋಜನೆಗಳಲ್ಲಿ ಏನೇನು ಅಕ್ರಮವಾಗಿದೆ ಅಂತಾ ಸಿಎಜಿ ವರದಿಯನ್ನು ನಾನು ನೋಡಿದ್ದೇನೆ. ರಾಜ್ಯ ಸರ್ಕಾರದವರು ಅಭಿವೃದ್ಧಿ ಯೋಜನೆಗಳಿಗೆ ದುಡ್ಡು ಎಲ್ಲಿಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಆಂಧ್ರಪ್ರದೇಶ ವಿಭಜನೆಯಾದ ಬಳಿಕ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡಲಾಗುತ್ತಿದೆ. ಆಂಧ್ರದ ಪೋಲಾವರಂ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ‌. ಬಿಹಾರದಲ್ಲಿ ಮಳೆಗಾಲದಲ್ಲಿ ನೆರೆಯಿಂದ ಉಂಟಾಗುತ್ತಿರುವ ಹಾನಿ ತಡೆಯುವ ಸಲುವಾಗಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಬಜೆಟ್​ನಲ್ಲಿ ನಮ್ಮ ರಾಜ್ಯಕ್ಕೆ ವಿಶೇಷ ಆದ್ಯತೆ ನೀಡುವಂತೆ ಮನವಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಗಿನಲ್ಲಿ ಭೀಕರ ಪ್ರವಾಹ ಬಂತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತು‌. ಸ್ವತಃ ಪ್ರಧಾನಿಯವರೇ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದರು. ಅಂತಹ ವಾತಾವರಣವನ್ನು ನೀವೇಕೆ ಸೃಷ್ಟಿಸಿಕೊಂಡಿಲ್ಲ? ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಏಕೆ ದೂರುತ್ತೀರಿ? ರಾಜ್ಯದ ಸಂಸದರ ಮೇಲೆ ಏಕೆ ಆರೋಪಗಳನ್ನು ಮಾಡುತ್ತೀರಿ? ಹಾಗಾದರೆ ರಾಜ್ಯ ಸರ್ಕಾರದ ಕೆಲಸವಾದರೂ ಏನು? ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಜಿ ಡಿ ಹರೀಶ್ ಗೌಡ, ಎಂಎಲ್​ಸಿಗಳಾದ ಸಿ ಎನ್ ಮಂಜೇಗೌಡ, ವಿವೇಕಾನಂದ, ಮಾಜಿ ಸಚಿವ ಸಾ ರಾ ಮಹೇಶ್, ಮಾಜಿ ಶಾಸಕರಾದ ಕೆ ಮಹದೇವ್, ಅಶ್ವಿನ್ ಕುಮಾರ್ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular