ಬೆಂಗಳೂರು : ರಾಜಕೀಯ ಉದ್ದೇಶವಿಲ್ಲದೆ ದೇಶದಲ್ಲಿ ಆದಾಯ ತೆರಿಗೆ ಇಲಾಖೆಯಿಂದ (ಐಟಿ) ದಾಳಿ ನಡೆಯುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ಬೆಂಗಳೂರಿನಲ್ಲಿ ಐಟಿ ದಾಳಿ ಆರಂಭವಾಗಿದೆ. ಇದರ ಹಿಂದೆ ರಾಜಕೀಯ ಉದ್ದೇಶ ಇದೆಯೇ ಎಂಬ ಪ್ರಶ್ನೆಗೆ, ರಾಜಕೀಯ ಇಲ್ಲದೆ ಯಾವುದೇ ಐಟಿ ದಾಳಿಯೂ ನಡೆಯುವುದಿಲ್ಲ ಎಂದರು.
ಪಂಚರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಹಣ ಕಳುಹಿಸಲಾಗುತ್ತಿದೆ ಎಂಬ ಮಾಜಿ ಸಚಿವ ಅಶ್ವಥ್ ನಾರಾಯಣ ಆರೋಪಕ್ಕೆ, ಹಾದಿ ಬೀದಿಯಲ್ಲಿ ಹೋಗುವವರ ಮಾತಿಗೆ ನಾನು ಉತ್ತರಿಸುವುದಿಲ್ಲ ಎಂದು ಟಾಂಗ್ ನೀಡಿದರು. ಬಿಬಿಎಂಪಿಯಿಂದ ಬಿಡುಗಡೆ ಆದ ೬೫೦ ಕೋಟಿ ರೂ ಅನುದಾನದಲ್ಲಿ ಪಡೆದ ಕಮಿಷನ್ ಹಣವನ್ನು ಅಂಬಿಕಾಪತಿ ಮೂಲಕ ಕಳುಹಿಸುತ್ತಿದ್ದರು ಎಂಬ ಆರೋಪದ ಬಗ್ಗೆ ಮಾತನಾಡುತ್ತಾ, ಈ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ನಮ್ಮ ಪರಿಸ್ಥಿತಿ ರೈತರಿಗಿಂತ ಶೋಚನೀಯವಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಬಿಲ್ ಪಾವತಿ ವಿಚಾರದಲ್ಲಿ ಕೆಂಪಣ್ಣ ಆತಂಕಪಡುವ ಅಗತ್ಯವಿಲ್ಲ. ಏನಾದರೂ ಇದ್ದರೆ ಬಂದು ನಮ್ಮ ಬಳಿ ಮಾತನಾಡಲಿ. ನಾವು ನ್ಯಾಯ ಒದಗಿಸುತ್ತೇವೆ. ಕೆಂಪಣ್ಣ ಮನವಿ ಮೇರೆಗೆ ನಾವು ತನಿಖೆ ಪಕ್ಕಕ್ಕಿಟ್ಟು, ಆದ್ಯತೆ ಮೇರೆಗೆ ಕಾಮಗಾರಿಗಳ ೬೦-೭೦% ಹಣ ಬಿಡುಗಡೆ ಮಾಡಿದ್ದೇವೆ. ಬಿಲ್ ಪಾವತಿ ಸಮಯದಲ್ಲಿ ಜಿಎಸ್‌ಟಿ ಕೂಡ ಪಾವತಿ ಮಾಡಬೇಕು. ಹೀಗಾಗಿ ತನಿಖೆ ವರದಿ ಬರುವ ಮುನ್ನವೇ ನಾವು ಸುಮಾರು ಮುಕ್ಕಾಲು ಭಾಗ ಹಣ ಬಿಡುಗಡೆ ಮಾಡಿದ್ದೇವೆ ಎಂದರು.
ಲೋಡ್ ಶೆಡ್ಡಿಂಗ್ ಕುರಿತು ಮಾತನಾಡಿ, ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆ ಕರೆದಿದ್ದಾರೆ. ನಾವು ಅಧಿಕಾರದಲ್ಲಿ ಇದ್ದಾಗ ಎಷ್ಟು ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಿದ್ದೆವು, ಬಿಜೆಪಿ ಅವರ ಅವಧಿಯಲ್ಲಿ ಎಷ್ಟು ವಿದ್ಯುತ್ ಉತ್ಪಾದನೆ ಹೆಚ್ಚಳ ಆಗಿದೆ ಎಂಬ ಮಾಹಿತಿ ನನ್ನ ಬಳಿ ಇದೆ. ಮುಖ್ಯಮಂತ್ರಿಗಳ ಸಭೆ ಬಳಿಕ ನಾನು ಮಾತನಾಡುತ್ತೇನೆ ಎಂದು ಹೇಳಿದರು.