ಬೆಂಗಳೂರು: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಮಾಡುವ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನಿಲುವಿಗೆ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, “ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ಮೈಸೂರು ದಸರಾದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ. ವರ್ಷಗಳಿಂದ ನಡೆದುಕೊಂಡು ಬಂದಿರುವ ದಸರಾ ಸಂಪ್ರದಾಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಬಾರದು” ಎಂದು ಹೇಳಿದ್ದಾರೆ.
ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕವಾಗಿದ್ದು, ಅದರ ಮೂಲ ನೆಲೆಯಲ್ಲೇ ಅದಕ್ಕೆ ಗೌರವ ಮತ್ತು ಪ್ರೋತ್ಸಾಹ ದೊರೆಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಕರಾವಳಿಯ ಹಸಿರು ಮತ್ತು ನೀರಿನ ವಾತಾವರಣದಲ್ಲೇ ಕಂಬಳದ ಸೊಬಗು ಕಣ್ತುಂಬಿಕೊಳ್ಳಲು ಸಾಧ್ಯ. ಅದನ್ನು ಬೇರೆಡೆಗೆ ಸ್ಥಳಾಂತರಿಸುವುದರಿಂದ ಅದರ ಪಾವಿತ್ರ್ಯ ಮತ್ತು ಪರಂಪರೆಗೆ ಧಕ್ಕೆ ಉಂಟಾಗಬಹುದು. ಮೈಸೂರು ಹಾಗೂ ಕರಾವಳಿ ಭಾಗದ ಜನರ ಭಾವನೆಗಳಿಗೆ ನೋವುಂಟು ಮಾಡುವ ನಿರ್ಧಾರ ಬೇಡ” ಎಂದು ತಿಳಿಸಿದ್ದಾರೆ.
ಈ ಮೊದಲು ಸಂಸದ ಯದುವೀರ್ ಒಡೆಯರ್ ಕೂಡ ಇದೇ ನಿಲುವು ವ್ಯಕ್ತಪಡಿಸಿದ್ದರು. ಕಂಬಳ ಕ್ರೀಡೆಗೆ ತಾವು ವಿರೋಧಿಗಳಲ್ಲ. ಆದರೆ ಮೈಸೂರು ದಸರಾ ವೇದಿಕೆಯಲ್ಲಿ ಅದನ್ನು ಬಲವಂತವಾಗಿ ಸೇರಿಸುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದರು. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲೂ ಈ ಬಗ್ಗೆ ಮರುಪರಿಶೀಲನೆ ಮಾಡುವಂತೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದರು.
ಇದೇ ವೇಳೆ, ಬಿಡದಿ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಕೃಷಿಗಿಂತ ರಿಯಲ್ ಎಸ್ಟೇಟ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆ ನಡೆಸಿದ ರೈತರ ಮೇಲೆ ಪೊಲೀಸರು ತೋರಿದ ವರ್ತನೆಯನ್ನು ಖಂಡಿಸಿದ ಅವರು, ಲಾಠಿ ಮೂಲಕ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.



