ರಾಮನಗರ : ನನಗೆ ಮಾತಾಡೋ ಚಪಲ, ಅವನಿಗೆ ಲೂಟಿ ಚಪಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, `ಡಿಕೆಶಿ ತಮ್ಮ ಮೊನ್ನೆ ಏನೋ ಹೇಳವ್ನೆ, ನಮಗೆ ಮಾತನಾಡುವ ಚಪಲ ಅಂದವ್ನೆ’ ಹೌದು..ನನಗೆ ಮಾತಾಡುವ ಚಪಲ. ಅವನಿಗೆ ಲೂಟಿ ಚಪಲ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ನನ್ನನ್ನು ರಾಮನಗರದಿಂದ ಯಾರೂ ಓಡಿಸಲು ಆಗಲ್ಲ. 2028ಕ್ಕೆ ಗೆದ್ದು ನಿಜವಾದ ರಾಮರಾಜ್ಯ ತರೋದು ಶತಸಿದ್ಧ ಎಂದು ಶಪಥ ಮಾಡಿದ್ದಾರೆ.
ಡಿಕೆಶಿ ಜೊತೆ ಚರ್ಚೆ ಅನಾವಶ್ಯಕ. ನಾನು ಆ ವ್ಯಕ್ತಿ ಜೊತೆ ಹೋಲಿಕೆ ಮಾಡಿಕೊಳ್ಳಲ್ಲ. ಕಲ್ಲುಬಂಡೆ ಒಡೆದು ಜೀವನ ಮಾಡಿಲ್ಲ. ಯಾರ ಜಮೀನನ್ನೂ ಕಬಳಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, 2018ರಲ್ಲಿ ಸಿದ್ದರಾಮಯ್ಯ ಅವರಪ್ಪರಾಣೆ ಹೆಚ್‌ಡಿಕೆ ಸಿಎಂ ಆಗಲ್ಲ ಎಂದಿದ್ದರು. ಆಮೇಲೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಈ ಸರ್ಕಾರದ ಆಯಸ್ಸು 2 ವರ್ಷ ಮಾತ್ರ, 2028ಕ್ಕೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ನನಗೆ ಸಿಎಂ ಆಗೋದು ಮುಖ್ಯವಲ್ಲ. ನಾಡಿನಲ್ಲಿ ಜನತೆಯ ಸರ್ಕಾರ ತರೋದು ಮುಖ್ಯ ಎಂದು ಟಾಂಗ್ ನೀಡಿದ್ದಾರೆ.
ರಾಮನಗರ ಮಂದಿ ನನ್ನನ್ನ ಮನೆಮಗನಾಗಿ ಸ್ವೀಕಾರ ಮಾಡಿದ್ರು. 4 ಚುನಾವಣೆಯಲ್ಲಿ ಜನರೇ ಚುನಾವಣೆ ನಡೆಸಿ ಗೆಲ್ಲಿಸಿದ್ದರು. ನನ್ನ ಅಂತಿಮವಾದ ದಿನಗಳು, ಹೋರಾಟಗಳು ರಾಮನಗರದಲ್ಲೇ ನಡೆಯಲಿವೆ. ಮಂಡ್ಯ ಜನರ ಒತ್ತಡಕ್ಕೆ ಮಣಿದು ಮಂಡ್ಯಗೆ ಹೋದೆ ಅಷ್ಟೇ ಎಂದು ಪರೋಕ್ಷವಾಗಿ ರಾಮನಗರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ.



