Friday, April 11, 2025
Google search engine

Homeರಾಜ್ಯಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಯಾರೂ ಬಂದು ಇದುವರೆಗೆ ಅನುಮತಿ ಕೇಳಿಲ್ಲ: ಪೊಲೀಸ್ ಆಯುಕ್ತ ದಯಾನಂದ್

ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಯಾರೂ ಬಂದು ಇದುವರೆಗೆ ಅನುಮತಿ ಕೇಳಿಲ್ಲ: ಪೊಲೀಸ್ ಆಯುಕ್ತ ದಯಾನಂದ್

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಮುಗಿಬಿದ್ದಿರುವ ಉಭಯ ಪಕ್ಷಗಳು, ಆಗಸ್ಟ್​ 3 ರಂದು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲು ಮುಂದಾಗಿದೆ. ಆದರೆ, ತಮಗೆ ಈ ಬಗ್ಗೆ ಮಾಹಿತಿ ಇಲ್ಲ. ಯಾರೂ ವಿನಂತಿ ಮಾಡಿಲ್ಲ. ನಗರದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಬೆಂಗಳೂರು ನಗರ ಪೊಲಿಸ್ ಆಯುಕ್ತ ಬಿ. ದಯಾನಂದ್ ಸ್ಪಷ್ಟಪಡಿಸಿದರು.

ಪಾದಯಾತ್ರೆ ಎಲ್ಲಿಂದ, ಯಾವ ರೀತಿ ಶುರು ಮಾಡುತ್ತಾರೆ ಎಂಬುದು ಇನ್ನೂ ಗೊತ್ತಿಲ್ಲ. ನಗರದಲ್ಲಿ ಪ್ರತಿಭಟನೆಗೆ, ರ‍್ಯಾಲಿಗೆ, ಪಾದಯಾತ್ರೆಗೆ ಅನುಮತಿ ಇಲ್ಲ. ಹೈಕೋರ್ಟ್ ಆದೇಶದ ಅನ್ವಯ ಅನುಮತಿ ಇಲ್ಲ. ಆದರೂ ಪೂರಕವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ನನ್ನ ಮಟ್ಟದಲ್ಲಿ ಯಾರೂ ಬಂದು ಇದುವರೆಗೆ ಅನುಮತಿ ಕೇಳಿಲ್ಲ ಎಂದು ಅವರು ಹೇಳಿದರು.

ಬಿಜೆಪಿ- ಜೆಡಿಎಸ್ ಪಾದಯಾತ್ರೆಗೆ ನಾವು ಅನುಮತಿ ನೀಡುವುದಿಲ್ಲ. ಅವರು ಮಾಡುವುದಿದ್ದರೆ ಮಾಡಿಕೊಳ್ಳಲಿ, ಅದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಅಧಿಕೃತವಾಗಿ ಪೊಲೀಸ್ ಇಲಾಖೆಯಿಂದ ನಾವು ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಕೆಲವೇ ದಿನಗಳ ಹಿಂದೆ ಹೇಳಿದ್ದರು. ಇದೀಗ ನಗರ ಪೊಲೀಸ್ ಆಯುಕ್ತರೂ ಅದೇ ರೀತಿ ಹೇಳಿಕೆ ನೀಡಿದ್ದಾರೆ.

ಪಾದಯಾತ್ರೆ ವಿಚಾರವಾಗಿ ಬಿಜೆಪಿ ಮತ್ತು ಮಿತ್ರಪಕ್ಷ ಜೆಡಿಎಸ್ ಮಧ್ಯೆ ಗೊಂದಲ ಏರ್ಪಟ್ಟಿತ್ತು. ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದರು. ಅಲ್ಲದೆ, ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದೂ ಹೇಳಿದ್ದರು. ನಂತರ ಬಿಜೆಪಿ ಹೈಕಮಾಂಡ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.

ಇದೀಗ (ಆಗಸ್ಟ್ 3) ಶನಿವಾರದಂದು ಮೈಸೂರಿಗೆ ಪಾದಯಾತ್ರೆ ಆರಂಭವಾಗಲಿದೆ. ಸಣ್ಣಪುಟ್ಟ ಗೊಂದಲ ಇದ್ದರೂ ಪಾದಯಾತ್ರೆ ನಡೆಯಲಿದೆ. ಶನಿವಾರ ಬೆಳಗ್ಗೆ 8.30ಕ್ಕೆ‌ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಆರಂಭಗೊಳ್ಳಲಿದೆ. ಕುಮಾರಸ್ವಾಮಿಯೇ ಪಾದಯಾತ್ರೆಗೆ ಚಾಲನೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗುರುವಾರ ತಿಳಿಸಿದ್ದರು.

RELATED ARTICLES
- Advertisment -
Google search engine

Most Popular