ಬೆಂಗಳೂರು : ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ ಕಾಣಸಿಕೊಂಡಿದೆ ಎನ್ನುವ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಯಾರಿಗೂ ಝಿಕಾ ಪಾಸಿಟಿವ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೊಳ್ಳೆಗಳಿಗೆ ವೈರಸ್ ತಗುಲಿದೆ. ಅವುಗಳ ಪರೀಕ್ಷೆಯಲ್ಲಿ ಪೂಲ್‌ನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ೧೦ ದಿನಗಳ ಹಿಂದೆಯೇ ಆರೋಗ್ಯ ಇಲಾಖೆಗೆ ರಿಪೋರ್ಟ್ ಬಂದಿದೆ. ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.
ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಝಿಕಾ ಮತ್ತು ನಿಫಾ ಬೇರೆ ಬೇರೆ ವೈರಾಣುವಾಗಿದೆ. ನಿಫಾ ಗಂಭೀರ ವೈರಾಣುವಾಗಿದೆ. ಝಿಕಾ ಅಷ್ಟು ಮನುಷ್ಯರಿಗೆ ಬಾಧಿಸುವುದಿಲ್ಲ. ಆದ್ದರಿಂದ ಜನರಿಗೆ ಈ ಬಗ್ಗೆ ಭಯ ಬೇಡ. ಬಾಣಂತಿಯರು ಮಾತ್ರ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರು ಇದೇ ವೇಳೆ ಹೇಳಿದರು.
ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ಖಾಯಿಲೆ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ. ೩ ದಿನಗಳಲ್ಲಿ ಸ್ಪಷ್ಟವಾದ ರಿಪೋರ್ಟ್ ಬರುವ ಸಾಧ್ಯತೆ ಇದೆ. ಇಲಾಖೆಯಿಂದ ಮುಂಜಾಗ್ರತಾ ಕ್ರಮವನ್ನೂ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಸರ್ವಿಲೆನ್ಸ್ ಅಲ್ಲಿ ವೈರಸ್ ಇರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.