ಬೆಂಗಳೂರು : ಅರಣ್ಯ ಭೂಮಿಯನ್ನು ಮಾರಾಟ, ದಾನ ಮಾಡಲು ಯಾರಿಗೂ ಅವಕಾಶವಿಲ್ಲ, ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿ ಮರು ವಶಕ್ಕೆ ಪಡೆದ ಬಳಿಕ ಅಲ್ಲಿ ವೃಕ್ಷೋಧ್ಯಾನ ನಿರ್ಮಿಸಲಾಗುವುದು ಎಂದು ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್.ಎಂ.ಟಿ. ವಶದಲ್ಲಿರುವ ಜಮೀನು ಪಡೆದು ಯಾರಿಗೆ ಮಾರುತ್ತೀರಿ ಎಂದು ಕೇಳಿದ್ದಾರೆ. ಅರಣ್ಯ ಭೂಮಿ ಮಾರಾಟ ಮಾಡಿರುವುದು ಈಗ ನಿಮ್ಮ ಇಲಾಖಾ ವ್ಯಾಪ್ತಿಯಲ್ಲಿರುವ ಎಚ್.ಎಂ.ಟಿ.ಯೇ ಹೊರತು ಅರಣ್ಯ ಇಲಾಖೆ ಅಲ್ಲ ಎಂದು ತಿರುಗೇಟು ನೀಡಿದರು.
ಬೆಂಗಳೂರಿನ ಪ್ರಮುಖ ಭಾಗದಲ್ಲಿರುವ ಪೀಣ್ಯ ಜಾಲಹಳ್ಳಿ ಅರಣ್ಯ ಜಮೀನು ಮರು ವಶಕ್ಕೆಪಡೆದು ಶುದ್ಧ ಉಸಿರಾಟಕ್ಕೊಂದು ತಾಣ (ಲಂಗ್ ಸ್ಪೇಸ್) ನಿರ್ಮಾಣ ಮಾಡಲು ತಾವು ಬಯಸಿರುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ರಿಯಲ್ ಎಸ್ಟೇಟ್ ಸಂಸ್ಥೆಯಂತೆ ವರ್ತಿಸುತ್ತಿದೆ. ೧೯೯೭ರಿಂದ ೨೦೧೧ರವರೆಗೆ ಎಚ್.ಎಂ.ಟಿ. ಸಂಸ್ಥೆ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯನ್ನು ಅಕ್ರಮವಾಗಿ ಡಾಲರ್ಸ್ ಕನ್ ಸ್ಟ್ರಕ್ಷನ್ಸ್ ಅಂಡ್ ಎಂಜಿನಿಯರ್ಸ್ ಪ್ರೈ.ಲಿ., ಯು.ಎಸ್. ಸ್ಟೀಲ್ ಕಂಪನಿ, ಸಿಲ್ವರ್ ಲೈನ್ ಎಸ್ಟೇಟ್ಸ್, ಮನೆ ಕನ್ ಸ್ಟ್ರಕ್ಷನ್ಸ್ ಲಿ, ಎಂ.ಎಂ.ಆರ್. ಕನ್ ಸ್ಟ್ರಕ್ಷನ್ಸ್, ಬ್ರಿಗೇಡ್ ಎಂಟರ್ ಪ್ರೈಸಸ್, ಬಾಗಮನೆ ಡೆವಲಪರ್ಸ್ ಪ್ರೈ.ಲಿ. ಸೇರಿದಂತೆ ಹಲವು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ೧೬೫ ಎಕರೆ ಭೂಮಿಯನ್ನು ೩೧೩ ಕೋಟಿಗೂ ಹೆಚ್ಚು ಹಣಕ್ಕೆ ಮಾರಾಟ ಮಾಡಿದೆ ಎಂದರು.
ಪರಿಸರ ಹೋರಾಟಗಾರರೊಬ್ಬರು ಕಳೆದ ಜುಲೈ ೧೧ರಂದು ತಮ್ಮ ಕಚೇರಿಗೆ ನೀಡಿದ ದೂರು ಆಧರಿಸಿ, ಅಧಿಕಾರಿಗಳ ಸಭೆ ಕರೆದು ಚರ್ಚಿಸಿದಾಗ ಸತ್ಯ ಹೊರಬಿತ್ತು. ಹೀಗಾಗಿ ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಅಂದರೆ ೧೮೯೬ ಜೂನ್ ೧೧ರಲ್ಲೇ ಅಧಿಸೂಚಿತ ಅರಣ್ಯ ಗೆಜೆಟ್ ಆಗಿದೆ ಎಂದು ಹೇಳಿದರು.
ಈ ಭೂಮಿಯನ್ನು ೧೯೬೩ರಲ್ಲಿ ಎಚ್.ಎಂ.ಟಿ.ಗೆ ದಾನ ನೀಡಿರುವುದಾಗಿ ಹೇಳಲಾಗಿದೆ. ಈಗ ಕುಮಾರಸ್ವಾಮಿ ಅವರು ಭೂಮಿಯನ್ನು ಎಚ್.ಎಂ.ಟಿ. ಸಂಸ್ಥೆ ಖರೀದಿಸಿರುವುದಾಗಿ ಹೇಳುತ್ತಿದ್ದಾರೆ. ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಮಾಡದೆ, ೧೯೮೦ರ ಅರಣ್ಯ ಸಂರಕ್ಷಣಾ ಕಾಯಿದೆ ಸೆಕ್ಷನ್ ೨ರ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಮಾರಾಟ ಮಾಡಲು ಅಥವಾ ದಾನ ಮಾಡಲು ಕಾನೂನಿನಲ್ಲಿ ಅವಕಾಶವೇ ಇರುವುದಿಲ್ಲ.
ತಮ್ಮ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವೆ ಉತ್ತಮ ಸೌಹಾರ್ದ ಬಾಂಧವ್ಯವಿದೆ. ನಾನು ಹಿಂದೆಯೂ ದ್ವೇಷದ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡಲ್ಲ. ನಾನು ಯಾವುದೇ ಪೂರ್ವಾಗ್ರಹ ಪೀಡಿತನಾಗಿ ಎಚ್.ಎಂ.ಟಿ. ಭೂಮಿ ವಿಚಾರ ಪ್ರಸ್ತಾಪಿಸಿಲ್ಲ. ಬದಲಾಗಿ ತಮಗೆ ಬಂದ ದೂರಿನ ಮೇಲೆ ಸಚಿವನಾಗಿ ಕ್ರಮ ವಹಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.