ಬೆಂಗಳೂರು: ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ನಾವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಬಗ್ಗೆ ಯಾರೊಬ್ಬರೂ ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಇಂದು ಕೋವಿಡ್ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಮಾರ್ಗಸೂಚಿ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವುದಿಲ್ಲ ಎಂದರು.
ಕೋವಿಡ್ ಹೊಸ ಉಪತಳಿಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿದ್ದರೆ ಸಾಕು. ಆದರೆ ಹಿಂದಿನ ಸರ್ಕಾರದಲ್ಲಾದ ತಪ್ಪುಗಳು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈಗಿನ ಉಪತಳಿ JN.1 ಅಪಾಯಕಾರಿಯಲ್ಲ. ಈ ಉಪತಳಿ ರಾಜ್ಯದಲ್ಲಿ 92 ಪತ್ತೆಯಾಗಿದೆ. ಬೆಂಗಳೂರಲ್ಲಿ 80 ಪತ್ತೆಯಾಗಿದ್ದು 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಉಳಿದವರು ಮನೆಯಲ್ಲೇ ಇದ್ದಾರೆ. 20 ರಲ್ಲಿ 7 ಮಂದಿ ಐಸಿಯುನಲ್ಲಿದ್ದಾರೆ. ಆದರೆ ಇವರಿಗೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವ ಕಾರಣಕ್ಕೆ ಐಸಿಯುನಲ್ಲಿದ್ದಾರೆ ಎಂದರು.
ದಿನ 5000 ಟೆಸ್ಟ್ ಗಳು ನಡೆಯುತ್ತವೆ. ಬೆಂಗಳೂರಲ್ಲಿ ಸಾವಿರ ಪರೀಕ್ಷೆ ನಡೆಯುತ್ತಿವೆ. ಕ್ಯಾಬಿನೆಟ್ ಉಪಸಮಿತಿ ರಚಿಸಲಾಗುವುದು, ಇವರು ಸಲಹಾ ಸಮಿತಿ ಜತೆ ಸಂಪರ್ಕದಲ್ಲಿದ್ದು ನಿರಂತರ ನಿಗಾ ಇಡಬೇಕು. ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಪೂರ್ತಿಯಾಗಿ ಜಾರಿ ಮಾಡಬೇಕು. ಗಡಿ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಪರೀಕ್ಷೆಯಾಗಬೇಕು. ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿದ್ದರೆ ಸಾಕು ಎಂದರು.
ಜನಸಂದಣಿಯಲ್ಲಿ ಮಾಸ್ಕ್ ಧರಿಸಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸದ್ಯ ರಾಜ್ಯದಲ್ಲಿ 60 ವರ್ಷ ಕೆಳಗಿನವರಿಗೆ ಮಾಸ್ಕ್ ಕಡ್ಡಾಯವಿಲ್ಲ. ಜನಸಂದಣಿಗೆ ಹೋಗುವವರು ಮಾಸ್ಕ್ ಧರಿಸಿದರೆ ಒಳ್ಳೆಯದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಡೆಡಿಕೇಟೆಡ್ ಆಸ್ಪತ್ರೆಗಳಲ್ಲಿ ಸಕಲ ಸಿದ್ದತೆ ಇರುತ್ತವೆ. ಎಲ್ಲಾ ಜಿಲ್ಲೆಗಳಲ್ಲೂ ಆಕ್ಸಿಜನ್, ಬೆಡ್, ವೆಂಟಿಲೇಟರ್ ಸೇರಿ ಕೋವಿಡ್ ಸಂಬಂಧಿತ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳಬೇಕು. ಲಸಿಕೆಗಳನ್ನು ಸಿದ್ದವಿಟ್ಟುಕೊಳ್ಳಲು ಸೂಚಿಸಲಾಗಿದೆ. ಕೇರಳದಲ್ಲಿ ಪರೀಕ್ಷೆ ಹೆಚ್ಚಿದೆ, ಆದ್ದರಿಂದ ಪ್ರಮಾಣ ಕೂಡ ಹೆಚ್ಚಿದೆ. ಇಲ್ಲಿ ಪರೀಕ್ಷೆಗಳು ಹೆಚ್ಚಾದಂತೆ ಪತ್ತೆ ಪ್ರಮಾಣವೂ ಹೆಚ್ಚಾಗಿದೆ ಎಂದರು.
ಸಾಕಷ್ಟು ಹಣ ಇದೆ. ಕೋವಿಡ್ ನಿರ್ವಹಣೆಗೆ ಹಣಕಾಸಿಗೆ ಕೊರತೆ ಇಲ್ಲ. ಪರಿಸ್ಥಿತಿ ನೋಡಿಕೊಂಡು ಮೀಸಲು ಆಸ್ಪತ್ರೆಗಳನ್ನು ನಿಗದಿ ಮಾಡುತ್ತೇವೆ. ಈಗಲೇ ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎನ್ನುವ ಸಲಹೆ ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರಿಂದ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.