ಬೆಂಗಳೂರು: ಅರ್ಥಶಾಸ್ತ್ರದ ಬಗ್ಗೆ ಗೊತ್ತಿರುವ ಯಾರೂ ಬೆಲೆ ಏರಿಕೆ ವಿರೋಧ ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ಆರ್.ವಿ ದೇಶಪಾಂಡೆ ಅವರು ರಾಜ್ಯ ಸರ್ಕಾರದ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಮಾಡುತ್ತಿರುವ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಅಹೋರಾತ್ರಿ ಧರಣಿ ಮಾಡುವುದು ಅವರ ಇಷ್ಟ. ಆದರೆ, ಅದರಲ್ಲಿ ಯಶಸ್ಸು ಆಗುವುದಿಲ್ಲ. ಬಿಜೆಪಿ ಅಧಿಕಾರದಲ್ಲಿ ಬೆಲೆ ಏರಿಕೆ ಮಾಡಿರಲಿಲ್ವಾ? ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ನೀತಿಗಳೇ ಪ್ರಮುಖ ಕಾರಣ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಇದಕ್ಕೆ ಕಾರಣ ಮೇವಿನ ಬೆಲೆ ಜಾಸ್ತಿ ಆಗಿರುವುದು. ಬೆಲೆ ಏರಿಕೆ ಆದಾಗ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕು.
ಹಣ ಎಲ್ಲಿಂದ ತರಲು ಆಗುತ್ತದೆ. ಸರ್ಕಾರ ಸ್ವಲ್ಪ ಬೆಲೆ ಏರಿಕೆ ಮಾಡಿದೆ ನಿಜ. ಹಾಗಂತ ಜನರನ್ನ ಲೂಟಿ ಮಾಡಲು ಮಾಡಿದೆ ಎಂದು ಹೇಳುವುದು ಸರಿಯಲ್ಲ. ಪೆಟ್ರೋಲ್, ಡೀಸೆಲ್ ದರ ಕಂಟ್ರೋಲ್ ಮಾಡುವುದು ಕೇಂದ್ರ ಸರ್ಕಾರ. ಕೆಲವೊಮ್ಮೆ ದರ ಹೆಚ್ಚಳ ಅನಿವಾರ್ಯವಾಗಿರುತ್ತದೆ. ಅರ್ಥಶಾಸ್ತ್ರದ ಬಗ್ಗೆ ಗೊತ್ತಿರುವವರು ಯಾರು ಬೆಲೆ ಏರಿಕೆ ವಿರೋಧಿಸಲ್ಲ ಇದು ರಿಯಾಲಿಟಿ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಜನರಿಗೆ ತೊಂದರೆ ಆಗಲು ಬೆಲೆ ಏರಿಕೆ ಮಾಡಿಲ್ಲ. ಕಾಂಗ್ರೆಸ್ ಏನೇ ಮಾಡಿದರೂ ನ್ಯಾಯ ಬದ್ಧವಾಗಿ ಮಾಡುತ್ತದೆ. ಅನೇಕ ಯೋಜನೆಯನ್ನು ಜನರಿಗಾಗಿಯೇ ತರುತ್ತಿದ್ದೇವೆ. ಅದರ ಲಾಭ ಎಲ್ಲರಿಗೂ ಹೋಗುತ್ತಿದೆ. ಗ್ಯಾರಂಟಿ ಯೋಜನೆಯಿಂದ ಎಲ್ಲಾ ಜನರಿಗೆ ಅನುಕೂಲ ಆಗಿದೆ ಎಂದು ಹೇಳಿದರು.