ಮಂಗಳೂರು (ದಕ್ಷಿಣ ಕನ್ನಡ): ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಆರು ತಿಂಗಳು ಕಳೆಯುವುದರೊಳಗೆ ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಇದರ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುವ ಅವಕಾಶವನ್ನು ನನಗೆ ನೀಡಿದ್ದಾರೆ. ನಮ್ಮ ರಾಜ್ಯದ ಬಜೆಟ್ ಗಾತ್ರ 3 ಲಕ್ಷದ 78 ಕೋಟಿ ರೂಪಾಯಿ. ಆದರೆ ವಾರ್ಷಿಕ 56000 ಕೋಟಿ ರೂಪಾಯಿ ಹಣವನ್ನು ನಮ್ಮ ಪಂಚ ಗ್ಯಾರಂಟಿ ಯೋಜನೆಗಳಿಗೆ ವ್ಯಯ ಮಾಡಬೇಕಿದೆ. ರಾಜ್ಯದ ಜನತೆಗೆ ನೀಡಿರುವ ಉಚಿತ ವಿದ್ಯುತ್ ಬಿಲ್ ಯೋಜನೆ, ವಿದ್ಯಾವಂತ ನಿರುದ್ಯೋಗಿ ಭತ್ಯೆ, ಶಕ್ತಿ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಯೋಜನೆ, ಅನ್ನ ಭಾಗ್ಯ ಯೋಜನೆಯಲ್ಲಿ 5 ಕೆಜಿ ಇದ್ದ ಅಕ್ಕಿಯನ್ನು 10 ಕೆಜಿಗೆ ಏರಿಕೆ, ಮಹಿಳೆಯರ ಖಾತೆಗೆ ನೇರವಾಗಿ ಜಮೆ ಮಾಡುವ ಗೃಹಲಕ್ಷ್ಮಿ ಯೋಜನೆ ಇದೆಲ್ಲ ನಮ್ಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದರು.
ವಿದ್ಯಾವಂತ ಫಲಾನುಭವಿಗಳಲ್ಲಿ 4240 ಅಭ್ಯರ್ಥಿಗಳು, ಗೃಹಲಕ್ಷ್ಮಿ ಯೋಜನೆಯಲ್ಲಿ 3,72,300 ಮಹಿಳೆಯರು, ಶಕ್ತಿ ಯೋಜನೆಯಲ್ಲಿ 6 ಕೋಟಿ 79 ಲಕ್ಷ ಮಹಿಳೆಯರು ಪ್ರಯಾಣ, ಅನ್ನ ಭಾಗ್ಯ ಯೋಜನೆಯಡಿಯಲ್ಲಿ 2,59,730 ಪಡಿತರ ಚೀಟಿ ಹೊಂದಿದವರ ಖಾತೆಗೆ 5.61 ಲಕ್ಷ ಅರ್ಹ ಫಲಾನುಭವಿಗಳಿದ್ದು 282.03 ಕೋಟಿ ವರ್ಗಾವಣೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಗೆ 1464 ಕೋಟಿ 21 ಲಕ್ಷದ 94,500 ಹಣ ಬಂದಿದೆ.
ಸರಕಾರದಲ್ಲಿ ಹಣವಿಲ್ಲ ಅಭಿವೃದ್ಧಿ ಕಾರ್ಯ ನಿಂತಿದೆ ಎಂದು ಬಿಜೆಪಿ ಸಹಿತ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ, ಹಾಗಾದರೆ ಜಿಡಿಪಿಯಲ್ಲಿ ನಮ್ಮ ರಾಜ್ಯ ದೇಶದಲ್ಲೇ ಪ್ರಥಮ ಹೇಗೆ ಬಂದಿದೆ? ನಮ್ಮ ಯೋಜನೆಗಳಲ್ಲಿ ಯಾರಿಗೂ ಪರ್ಸಂಟೆಜ್ ಸಿಗುತ್ತಿಲ್ಲ, ನೇರವಾಗಿ ಅರ್ಹ ವ್ಯಕ್ತಿಗಳ ಖಾತೆಗೆ ಜಮೆ ಆಗುತ್ತಿರುವ ಕಾರಣ ಹಣ ಮಾಡಲು ಆಗುತ್ತಿಲ್ಲ ಇದೇ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ. ಈ ಯೋಜನೆಗಳಿಂದ ಯಾರೂ ದಿವಾಳಿಯಾಗುವುದಿಲ್ಲ“ ಎಂದು ಹೇಳಿದರು.
“ಮಂಗಳೂರು ಪತ್ರಕರ್ತರ ಸಂಘ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಇದರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಒಳ್ಳೆಯ ಕೆಲಸ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದೆ. ಮಡಪ್ಪಾಡಿಯಲ್ಲಿ ನಡೆದಿದ್ದ ಗ್ರಾಮ ವಾಸ್ತವ್ಯದಿಂದ ಊರಿಗೆ ಸುಸಜ್ಜಿತ ರಸ್ತೆ ಸಹಿತ ಅನೇಕ ಯೋಜನೆಗಳು ಜಾರಿಯಾಗಿವೆ. ಇದಕ್ಕಾಗಿ ಅಭಿನಂದನೆಗಳು“ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಬಿ.ಎನ್., ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.