ಹುಬ್ಬಳ್ಳಿ : ಬಿಜೆಪಿಯಿಂದ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಂದಿನ ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ನಾನು ಇಲ್ಲದೆ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹೃದಯದಲ್ಲಿ ಬಿಜೆಪಿ ಇದೆ. ಉಚ್ಚಾಟನೆ 6 ತಿಂಗಳು ನಡೆಯಲ್ಲ. ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟಿಲ್ ನನ್ನ ಹೊರ ಹಾಕಿರಬಹುದು. ಪಕ್ಷದಿಂದ ನನ್ನನ್ನು ಹೊರಗೆ ಹಾಕಿದರೆ ಏನು ಕಿಸಿಯೋಕೆ ಆಗಲ್ಲ ನಾನು ಹಿಂದುಗಳ ಪರ ಇದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸನಾತನ ಧರ್ಮ ಉಳಿದರೆ ವಿಭೂತಿ ಉಳಿಯುತ್ತದೆ. ಇಲ್ಲ ಅಂದರೆ ಎಲ್ಲರೂ ಮಸೀದಿಗೆ ಹೋಗಬೇಕು. ನಾನು ಇಲ್ಲದೆ ಯಾವ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಆಗಲ್ಲ. ನನಗೆ ಜನರ ಆಶೀರ್ವಾದ ಇದೆ. ನಾನು ದೊಡ್ಡವನಾಗಲು ಭಗವಾಧ್ವಜ, ಶ್ರೀರಾಮ ಕಾರಣ. ನನಗೆ ಮೂರು ಸಾವಿರ ಮಠದ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಕೆಲವರು ಪೊಲೀಸ್ ಠಾಣೆಗೆ ನುಗ್ಗಿದರು. ನಾನು ಗ್ರಹ ಮಂತ್ರಿ ಆಗಿದ್ದರೆ ಅವರನ್ನು ಜನ್ನತ್ ಗೆ ಕಳುಹಿಸುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು.