ಬೆಂಗಳೂರು: ಬೆಂಗಳೂರು ನಗರ, ರಾಜ್ಯಾದ್ಯಂತ ವಿದ್ಯುತ್ ಕಡಿತವಿರುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಅಥವಾ ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲತೆ ಮಾಡುವ ಹಿನ್ನೆಲೆಯಲ್ಲಿ ಸುದೀರ್ಘ ನಿರ್ವಹಣಾ ಕಾರ್ಯಗಳನ್ನೂ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದರು.
2023 ರ ವಿದ್ಯುತ್ ಪರಿಸ್ಥಿತಿ ಮತ್ತೆ ಎದುರಾಗದಂತೆ ಮಾಡಲು ಸರ್ಕಾರವು 1500MW ವಿದ್ಯುತ್ ಅನ್ನು ಖರೀದಿಸುತ್ತಿದೆ, ಅದರಲ್ಲಿ 500MWನ್ನು ವಿನಿಮಯ ವ್ಯವಸ್ಥೆಯ ಮೂಲಕ ಇತರ ರಾಜ್ಯಗಳೊಂದಿಗೆ ಪಡೆಯಲಾಗುತ್ತದೆ. ಥರ್ಮಲ್ ಸ್ಟೇಷನ್‌ಗಳ ನಿರ್ವಹಣಾ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದ್ದು, ಬಳ್ಳಾರಿ ಅನಿಲ ಆಧಾರಿತ ವಿದ್ಯುತ್ ಕೇಂದ್ರದ ಕಾಮಗಾರಿಯೂ ಪೂರ್ಣಗೊಂಡಿದೆ. ಒಂದು ತಿಂಗಳ ಅವಧಿಯಲ್ಲಿ ಇದರ ಕಾರ್ಯಾಚರಣೆ ಆರಂಭವಾಗಲಿದೆ. ಕೂಡಗಿ ವಿದ್ಯುತ್ ಕೇಂದ್ರಕ್ಕೆ 200 ಮೆಗಾವ್ಯಾಟ್ ವಿದ್ಯುತ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಕಳೆದ ವರ್ಷವೂ ಕಠಿಣ ಪರಿಸ್ಥಿತಿ ಹಾಗೂ ಬರಗಾಲದ ಹೊರತಾಗಿಯೂ, ಯಾವುದೇ ವಿದ್ಯುತ್ ಕಡಿತ ಇರಲಿಲ್ಲ. ಇದನ್ನು ಈ ವರ್ಷವೂ ಮುಂದುವರೆಸಲಾಗುವುದು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು, ರೈತರು ಮತ್ತು ಗ್ರಾಹಕರಿಗೆ ಯಾವುದೇ ವಿದ್ಯುತ್ ಕಡಿತ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ವಿದ್ಯುತ್‌ಗೆ ಗರಿಷ್ಠ ಬೇಡಿಕೆ ಹೆಚ್ಚುತ್ತಿದ್ದು, ಬೇಸಿಗೆಯ ಆರಂಭದೊಂದಿಗೆ ಬೇಡಿಕೆ ಹೆಚ್ಚಿದೆ, ಹೀಗಾಗಿ ವಿದ್ಯುತ್ ಖರೀದಿ ಮಾಡಲಾಗಿದೆ. ಸೌರಶಕ್ತಿಯ ಸೂಕ್ತ ಬಳಕೆಗೂ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.