ಬೆಂಗಳೂರು: ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಪ್ರೀತಿ ಮತ್ತು ಅನುಕಂಪಗಳೇ ಎಲ್ಲ ಧರ್ಮಗಳ ತಿರುಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಳಗಾವಿಯ ಫಾತಿಮಾ ಕ್ಯಾಥೆಡ್ರಲ್ ಮತ್ತು ಬೆಳಗಾವಿ ಡಯಾಸಿಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಿಎಂ, ಆರ್ಚ್ ಬಿಷಪ್ ಡೆರೆಕ್ ಫೆರ್ನಾಂಡೀಸ್ ಅವರಿಂದ ಗೌರವ ಸ್ವೀಕರಿಸಿ, ಬಳಿಕ ಸಮಸ್ತ ಕ್ರಿಶ್ಚಿಯನ್ ಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿ ಮಾತನಾಡಿದರು.
ಆ ವೇಳೆ ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ ಪ್ರೀತಿ ಮತ್ತು ಅನುಕಂಪಗಳೇ ಎಲ್ಲ ಧರ್ಮಗಳ ತಿರುಳು ಎಂದರು ಹಾಗೂ ನಮ್ಮ ದೇಶದಲ್ಲಿ ಹಲವು ಜಾತಿಧರ್ಮಗಳ ಜನರಿದ್ದರೂ, ಎಲ್ಲರೂ ಐಕ್ಯತೆ ಹಾಗೂ ಸಾಮರಸ್ಯದಿಂದ ಬಾಳುವ ಅವಶ್ಯಕತೆಯಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮಾನವೀಯ ಸಮಾಜವನ್ನು ನಿರ್ಮಿಸಬೇಕು ಎಂದು ತಿಳಿಸಿದರು.
ಮುಂದುವರೆಸುತ್ತಾ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಹಾಗೂ ವೈಚಾರಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಸಮಾನ ಅವಕಾಶಗಳನ್ನು ನೀಡುವ, ಸಮಾಜವಾದವನ್ನು ಪ್ರತಿಪಾದಿಸುವ ಸಮಾಜ ನಿರ್ಮಿಸುವ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಇದಕ್ಕೆ ಪೂರಕವಾಗಿ ಕ್ರಿಶ್ಚಿಯನ್ ಸಮುದಾಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಆದರೆ ಕೆಲವು ಪಟ್ಟಭದ್ರಹಿತಾಸಕ್ತಿಗಳು ದ್ವೇಷ ಬಿತ್ತುವ ಕೆಲಸದಲ್ಲಿ ನಿರತವಾಗಿದೆ. ಎಲ್ಲ ಧರ್ಮಗಳ ತಿರುಳು ಪ್ರೀತಿ ಮತ್ತು ಅನುಕಂಪ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಕ್ರಿಶ್ಚಿಯನ್ ಸಹೋದರ ಸಹೋದರಿಯರಿಗೆ ಕ್ರಿಸ್‌ಮಸ್ ಶುಭಾಶಯಗಳನ್ನು ತಿಳಿಸಿ, ಕ್ರಿಸ್‌ಮಸ್ ಅನ್ನು ಸಂತೋಷ, ಶಾಂತಿ ಮತ್ತು ಸಾರ್ವತ್ರಿಕ ಸಹೋದರತ್ವದ ಹಬ್ಬವೆಂದು ಬಣ್ಣಿಸಿದರು ಹಾಗೂ ನಾವು ಪರಸ್ಪರರ ನಂಬಿಕೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸಹಾನುಭೂತಿ ಹೊಂದಬೇಕು. ಹಬ್ಬಗಳನ್ನು ಒಟ್ಟಿಗೆ ಆಚರಿಸಬೇಕು, ಏಕತೆ ಮತ್ತು ಸಾಮರಸ್ಯವನ್ನು ಬಲಪಡಿಸಬೇಕು ಎಂದು ತಿಳಿಸಿದರು.



