ವರದಿ: ವಿನಯ್ ದೊಡ್ಡಕೊಪ್ಪಲು
ಕೆ . ಆರ್ ನಗರ: ಅತಿವೃಷ್ಟಿಯಿಂದ ಬಾಧಿತ ಪ್ರದೇಶಗಳಿಗೆ ಪ್ರಾಕೃತಿಕ ವಿಕೋಪ ನಿರ್ವಹಣೆ ನೋಡಲ್ ಅಧಿಕಾರಿಯೂ ಆದ ಕಬಿನಿ ಜಲಾಶಯ ವಿಶೇಷ ಭೂಸ್ವಾಧೀನಾಧಿಕಾರಿ ಸುಪ್ರಿಯಾ ಬಾಣಗಾರ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಕಾವೇರಿ ನದಿ ದಡದಲ್ಲಿರುವ ತಾಲೂಕಿನ ದೊಡ್ಡಹನಸೋಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು,ಉಕ್ಕಿ ಹರಿಯುತ್ತಿರುವ ನದಿಯ ದಡಕ್ಕೆ ಜನರು ಪ್ರವೇಶಿಸದಂತೆ ನಿರ್ಬಂಧ ವಿಧಿಸುವಂತೆ ಸ್ಥಳೀಯ ಕಂದಾಯ ಹಾಗು ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಹನಸೋಗೆ ಗ್ರಾಮದ ನದಿ ಬಳಿ ಮನೆ ನಿರ್ಮಿಸಿಕೊಂಡು ವಾಸವಿರುವ ಕುಮಾರ್ ಹಾಗು ರಾಜಮ್ಮಣ್ಣಿ ಕುಟುಂಬವನ್ನು ತೆರವು ಮಾಡಿ ಸೂಕ್ತ ಸ್ಥಳದಲ್ಲಿ ವಾಸವಿರಲು ಅನುಕೂಲ ಕಲ್ಪಿಸುವಂತೆ ನಿರ್ದೇಶನ ನೀಡಿದರು.ಮಳೆಯಿಂದಾಗುವ ಹಾನಿ ಸಂಬಂಧ ನಿತ್ಯ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
೪೫ ಮನೆಗಳಿಗೆ ಹಾನಿ: ಈ ವೇಳೆ ಮಾತನಾಡಿದ ತಹಸೀಲ್ದಾರ್ ನರಗುಂದ ಅವರು,ಸಾಲಿಗ್ರಾಮ ತಾಲೂಕಿನಲ್ಲಿ ಅತಿವೃಷ್ಟಿಯಿಂದ ೪೫ ವಾಸದ ಮನೆಗಳಿಗೆ ಹಾನಿಯಾಗಿದೆ.ಮಿರ್ಲೆ ಗ್ರಾಮದಲ್ಲಿ ಸುಮಾರು ೪ ಎಕರೆ ತೋಟದ ಬೆಳೆಗಳಿಗೆ ಹಾನಿಯಾಗಿದ್ದು,ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಉಪತಹಸೀಲ್ದಾರ್ ಗಳಾದ ಆರ್.ಎ.ಮಹೇಶ್,ಶರತ್,ಗ್ರಾಮ ಆಡಳಿತ ಅಧಿಕಾರಿಗಳು,ಸ್ಥಳೀಯ ಗ್ರಾ.ಪಂ.ಸಿಬ್ಬಂದಿ ಇದ್ದರು.