ಮೈಸೂರು: ಓಟಿಗಾಗಿ ರಾಮನನ್ನು ಜಪಿಸುತ್ತಾ ಯೊಜನೆ ಮತ್ತು ಕಾರ್ಯಕ್ರಮಗಳಲ್ಲಿ ರಾಮ ರಾಜ್ಯ ನಿರ್ಮಾಣದ ಸಮಾವೇಶ ಇಲ್ಲದ ಬಜೆಟ್ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕೇಂದ್ರ ಸರ್ಕಾರದ ಬಜೆಟ್ ಅನ್ನು ಟೀಕಿಸಿದ್ದಾರೆ.
ಇದು ಚುನಾವಣಾ ವರ್ಷ, ಬಜೆಟ್ ಕೇವಲ ಲೇಖಾನುಧಾನ ಪಡೆಯಲು ಮಂಡಿಸಿರುವ ಸೀಮಿತವಾಗಿರುವ ಬಜೆಟ್ ಆಗಿದೆ. ಕೃಷಿ ಮತ್ತು ಕೃಷಿಕರನ್ನು ಮೇಲೆತ್ತುವ ಯಾವುದೇ ಸ್ಪಷ್ಟ ಕಾರ್ಯಕ್ರಮ ಮತ್ತು ಅನುದಾನ ಈ ಬಜೆಟ್ ನಲ್ಲಿ ಇಲ್ಲ ಎಂದು ಜರಿದಿದ್ದಾರೆ. ೧೦ ವರ್ಷ ಪೂರೈಸುತ್ತಿರುವ ನರೇಂದ್ರ ಮೋದಿಯವರ ಸರ್ಕಾರ ಕೊನೆಗೂ ಸ್ವಾಮಿನಾಥನ್ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲೇ ಇಲ್ಲ. ರೈತರ ಆಧಾಯವನ್ನು ದ್ವಿಗುಣಗೊಳಿಸಲೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಚುನಾವಣೆಗೆ ರಾಮ ಜಪ ಮಾತ್ರ ಸಾಕು. ಈ ದೇಶದ ದುಡಿಯುವ ಜನರಿಗೆ ಯಾವುದೇ ಕಾರ್ಯಕ್ರಮ ಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಂತಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.