ಮೈಸೂರು : ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷಗಾದಿಗೆ ಅಲ್ಪಸಂಖ್ಯಾತರೂ ಆಕಾಂಕ್ಷಿಗಳಿದ್ದಾರೆ ಎಂದು ನಿನ್ನೆಯಷ್ಟೆ ಸಚಿವ ರಹೀಮ್ ಖಾನ್ ಹೇಳಿಕೆ ನೀಡಿದ್ದ ಬೆನ್ನಲ್ಲೆ, ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಕೆಪಿಸಿಸಿ ಕಾಯಾಧ್ಯಕ್ಷರೂ ಆದ ಶಾಸಕ ತನ್ವೀರ್ ಸೇಠ್ ಹೇಳಿದರು.
ಬಜೆಟ್ ನಂತರ ಸಂಪುಟ ವಿಸ್ತರಣೆ ಸಾಧ್ಯತೆ ಇರುವ ಕಾರಣ ತಾವೂ ಸಹ ಸಚಿವರಾಗುವ ರೇಸ್‌ನಲ್ಲಿ ಇರುವುದಾಗಿ ಹೇಳಿದ ತನ್ವೀರ್ ಸೇಠ್ ಕ್ಷೇತ್ರದ ಮತದಾರರು ತಾವು ಸಚಿವರಾಗಲು ಬಯಸುವುದು ಸಹಜ, ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗುವುದಾಗಿ ಅವರು ಹೇಳಿದರು.
ಮಾಜಿ ಮೇಯರ್ ಸಂದೇಶ್ ಸ್ವಾಮಿ ಎನ್‌ಆರ್ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿ ಎಂದು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಹಿಂದೆ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಆಡಳಿತ ಇತ್ತು, ಆವಾಗ ಸಂದೇಶ್ ಸ್ವಾಮಿ ಎಷ್ಟು ಅನುದಾನವನ್ನು ಈ ಕ್ಷೇತ್ರಕ್ಕೆಕೊಡಿಸಿದ್ದರು ಎಂಬುದರ ಲೆಕ್ಕ ಕೊಡಲಿ, ನಂತರ ನಾನು ನನ್ನ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆ ಎಂಬುದನ್ನು ಹೇಳುತ್ತೇನೆ ಎಂದರು.