ಬೆಂಗಳೂರು : ಯಾವುದೇ ಸ್ಪಷ್ಟನೆ ಕೇಳದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಸ್ ನೋಟಿಸ್ ಕೊಟ್ಟಿದ್ದಾರೆ. ಅದಕ್ಕೆ ಸಿಎಂ ಏನು ಉತ್ತರ ಕೊಡಬೇಕೋ ಕೊಡ್ತಾರೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ಕೊಟ್ಟಿರುವ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇಂದು ಕ್ಯಾಬಿನೆಟ್‌ನಲ್ಲಿ ಆ ಬಗ್ಗೆ ಚರ್ಚೆ ಮಾಡುತ್ತೇವೆ. ರಾಜ್ಯಪಾಲರಿಗೆ ಏನು ಉತ್ತರ ಕೊಡಬೇಕು ಎಂಬ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.
ಬಿಜೆಪಿ ಪಾದಯಾತ್ರೆ ವಿಚಾರದ ಬಗ್ಗೆ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರ ಪಾದಯಾತ್ರೆ ವಿಫಲವಾಗಿದೆ. ಅವರವರೇ ಜಗಳ ಮಾಡ್ಕೊಂಡು ಕೂತಿದ್ದಾರೆ. ನಾವು ಪಾದಯಾತ್ರೆ ಮಾಡಬೇಡಿ ಎಂದು ಹೇಳಿಲ್ಲ. ಆದರೆ ಅವರಲ್ಲೇ ಒಬ್ಬರು ಪಾದಯಾತ್ರೆ ಮಾಡಬೇಕು ಅಂತಾರೆ, ಇನ್ನೊಬ್ಬರು ಬೇಡ ಅಂತಿದ್ದಾರೆ. ಕುಮಾರಸ್ವಾಮಿ ಅವರು ಬಿಜೆಪಿ ಪಾದಯಾತ್ರೆಯಲ್ಲಿ ಭಾಗವಹಿಸೊಲ್ಲ ಅಂತಾ ಹೇಳಿದ್ದಾರೆ. ಅದು ಅವರಿಗೆ ಬಿಟ್ಟಿದ್ದು. ಆದರೆ ಈ ಪಾದಯಾತ್ರೆಯಲ್ಲಿ ಯಾವುದೇ ವಿಶೇಷ ಇಲ್ಲ. ಕೇವಲ ರಾಜಕೀಯ ಕಾರಣಕ್ಕೆ, ಸಿದ್ದರಾಮಯ್ಯ ಅವರನ್ನ ವಿರೋಧಿಸಲಿಕ್ಕೆಂದೇ ಮಾಡ್ತಿದ್ದಾರೆ. ಮುಡಾದಲ್ಲಿ ಏನೂ ನಡೆದಿಲ್ಲ ಎಂದರು.