ನವದೆಹಲಿ : ಕೇಂದ್ರ ಚುನಾವಣಾ ಆಯೋಗವು ಮುಂಬರುವ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮತ್ತು ಪ್ರತಿಯೊಬ್ಬ ನಾಗರಿಕನಿಗೆ ತಮ್ಮ ಮತದಾನದ ಹಕ್ಕನ್ನು ಸುಗಮವಾಗಿ ಚಲಾಯಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಮತದಾನದ ದಿನಗಳಂದು ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ.
ಈ ಆದೇಶವು ಕೇವಲ ಸರ್ಕಾರಿ ಕಚೇರಿಗಳಿಗೆ ಮಾತ್ರ ಸೀಮಿತವಲ್ಲ. ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳು, ಐಟಿ ಕಂಪನಿಗಳು, ಬ್ಯಾಂಕುಗಳು, ವ್ಯಾಪಾರಿ ಸಂಕೀರ್ಣಗಳು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಮತ್ತು ದಿನಗೂಲಿ ನೌಕರರಿಗೂ ಸಹ ಈ ರಜೆ ಅನ್ವಯಿಸಲಿದೆ. ಮತದಾನದ ಕಾರಣಕ್ಕಾಗಿ ನೀಡಲಾಗುವ ಈ ರಜೆಗೆ ಯಾವುದೇ ರೀತಿಯ ವೇತನ ಕಡಿತ ಮಾಡುವಂತಿಲ್ಲ ಎಂದು ಆಯೋಗವು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಚುನಾವಣಾ ಆಯೋಗದ ಪ್ರಕಾರ, ಉದ್ಯೋಗದ ಕಾರಣದಿಂದಾಗಿ ಯಾವುದೇ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಬಾರದು. ಪ್ರತಿಯೊಬ್ಬ ಅರ್ಹ ನಾಗರಿಕನೂ ತನ್ನ ಮತವನ್ನು ಚಲಾಯಿಸಲು ಸಾಧ್ಯವಾಗಬೇಕು ಎಂಬುದು ಆಯೋಗದ ಪ್ರಮುಖ ಉದ್ದೇಶವಾಗಿದೆ. ದಿನಗೂಲಿ ಕಾರ್ಮಿಕರು ಮತ್ತು ಅನಿಯಮಿತ ವೇತನದಲ್ಲಿ ದುಡಿಯುವವರು ಸಾಮಾನ್ಯವಾಗಿ ರಜೆ ತೆಗೆದುಕೊಂಡರೆ ಅವರ ದೈನಂದಿನ ವೇತನ ಕಡಿತವಾಗುತ್ತದೆ. ಅಂತಹವರಿಗೆ ಈ ಆದೇಶವು ದೊಡ್ಡ ಪರಿಹಾರವಾಗಿದೆ.
ಮತದಾನದ ದಿನದಂದು ಉದ್ಯೋಗಸ್ಥರು ತಮ್ಮ ಕೆಲಸದ ಸ್ಥಳದಿಂದ ತಮ್ಮ ಮತಗಟ್ಟೆಯ ಸ್ಥಳಕ್ಕೆ ಪ್ರಯಾಣಿಸಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ, ಉದ್ಯೋಗಿಗಳು ತಮ್ಮ ಮತವನ್ನು ಚಲಾಯಿಸಲು ಅನುಕೂಲವಾಗುವಂತೆ ಇಡೀ ದಿನ ರಜೆ ನೀಡಬೇಕು. ಮತದಾನದ ದಿನ ಉದ್ಯೋಗಿಗಳು ಸಂಪೂರ್ಣವಾಗಿ ಕರ್ತವ್ಯದಿಂದ ಮುಕ್ತರಾಗಿರಬೇಕು ಎಂದು ಆಯೋಗದ ಸೂಚನೆಯಾಗಿದೆ.
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ಚುನಾವಣಾ ಆಯೋಗವು ಎಚ್ಚರಿಕೆ ನೀಡಿದ್ದು, ಒಂದು ವೇಳೆ ಯಾವುದೇ ಸಂಸ್ಥೆ, ಕಂಪನಿ, ಕಾರ್ಖಾನೆ ಅಥವಾ ಮಾಲೀಕರು ಈ ಆದೇಶವನ್ನು ಉಲ್ಲಂಘಿಸಿ, ಮತದಾನದ ದಿನದಂದು ನೌಕರರಿಗೆ ರಜೆ ನೀಡಲು ನಿರಾಕರಿಸಿದರೆ ಅಥವಾ ವೇತನ ಕಡಿತಗೊಳಿಸಿದರೆ, ಅಂತಹವರ ವಿರುದ್ಧ ಜನಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 135(6) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅಂತಹ ಸಂಸ್ಥೆಗಳ ವಿರುದ್ಧ ದಂಡ ವಿಧಿಸಲಾಗುವುದು ಎಂದು ಹೇಳಿದೆ



