ಬೆಂಗಳೂರು: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ತುಂಡಾದ ಕಾರಣ ರಾಜ್ಯದ ಎಲ್ಲ ಅಣೆಕಟ್ಟುಗಳ ಸುರಕ್ಷತೆಗೆ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಅಣೆಕಟ್ಟುಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಗೇಟ್ ದುರಸ್ತಿ ಕಾರ್ಯ ಆರಂಭವಾಗಿದೆ. ನೀರಿನ ಪ್ರಮಾಣ ಕಡಿಮೆ ಮಾಡದೆ ದುರಸ್ತಿ ಕಾರ್ಯ ಸಾಧ್ಯವಿಲ್ಲ ಎಂದರು.
ತುಂಗಭದ್ರಾ ಜಲಾಶಯದ 19ನೇ ಗೇಟ್ ತುಂಡಾದ ಘಟನೆಗೆ ಅಧಿಕಾರಿಗಳನ್ನು ಹೊಣೆ ಮಾಡುವುದಕ್ಕಿಂತ ಅಣೆಕಟ್ಟು ಉಳಿಸಿ, ರೈತರನ್ನು ರಕ್ಷಣೆ ಮಾಡುವುದು ನಮ್ಮ ಆದ್ಯತೆ ಎಂದರು.
ಇದು 70 ವರ್ಷಗಳ ಹಳೆಯ ಅಣೆಕಟ್ಟು. ಅದರ ಸರಪಳಿ ತುಂಡಾಗಿದೆ. ರೈತರಿಗಾಗಿ ನೀರು ಉಳಿಸಲೇಬೇಕಿದೆ. ಹೀಗಾಗಿ, ಗೇಟ್ ಹಾಕಲು ಪ್ರಯತ್ನಿಸುತ್ತಿದ್ದೇವೆ. ಅಣೆಕಟ್ಟಿನಲ್ಲಿ ನೀರು ಕಡಿಮೆಯಾಗದ ಹೊರತು ಕೆಲಸ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ತ್ವರಿತಗತಿಯಲ್ಲಿ ಗೇಟ್ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಆರ್‌ಎಸ್‌ನಲ್ಲಿಯೂ ಸಮಸ್ಯೆಯಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿರುವ ಬಗ್ಗೆ ಕೇಳಿದಾಗ, ‘ಕುಮಾರಸ್ವಾಮಿಗೆ ರಾಜಕಾರಣ ಮಾತನಾಡುವುದು ಬಿಟ್ಟು ಬೇರೆ ಏನು ಗೊತ್ತು’ ಎಂದರು.