ಮಂಡ್ಯ: ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಸೂಚನೆ ಹಿನ್ನಲೆ ರಾಜ್ಯ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕ ತಿರುಗಿ ಬಿದ್ದಿದ್ದಾರೆ.
ಕಾವೇರಿ ನದಿ ನಿರ್ವಾಹಣಾ ಪ್ರಾಧಿಕಾರ ಹಾಗೂ ನೀರು ಬಿಟ್ಟ ರಾಜ್ಯ ಸರ್ಕಾರದ ನಡೆಗೆ ವಿರುದ್ಧ ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಜಿಲ್ಲೆಯ ರೈತರ ಬೆಳೆಗಳಿಗೆ ನೀರಿಲ್ಲ. ತಮಿಳುನಾಡಿನವರಿಗೆ ನೀರು ಬಿಡುವುದು ಸರಿಯಲ್ಲ. 5 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ ಕೊಟ್ಟಿದ್ದಾರೆ. ಒಂದೇ ಒಂದು ಅಡಿ ನೀರನ್ನು ತಮಿಳುನಾಡಿಗೆ ಬಿಡಬಾರದು. ನಮ್ಮ ರೈತರಿಗೆ ನೀರಿಲ್ಲ, ಕುಡಿಯುವುದಕ್ಕೆ ನೀರಿಲ್ಲ. ತಮಿಳುನಾಡಿಗೆ ಬಿಡಲು ನೀರು ಎಲ್ಲಿದೆ.? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಅವರು ಯಾವುದೇ ಕಾರಣಕ್ಕೂ ತಮಿಳುನಾಡಿನ ಒತ್ತಡಕ್ಕೆ ಮಣಿಯಬೇಡಿ. ಒಂದು ಇಂಚೂ ನೀರನ್ನು ತಮಿಳುನಾಡಿಗೆ ಬಿಡಬೇಡಿ ಏನಾಗುತ್ತೋ ನೋಡೋಣಾ? ಮಡಿಕೇರಿಯಿಂದ ಬರುವ ನೀರಿಗೆ ಅಣೆಕಟ್ಟು ಕಟ್ಟಿರುವುದಕ್ಕೆ ನೀರು ಬಿಡಿ ಅಂತಾರೆ. ಮೆಟ್ಟುರು ಡ್ಯಾಂ ವೀಕ್ಷಣೆ ಮಾಡಲು ನಮ್ಮನ್ನು ಬಿಡಿ. ನಮಗಿಂತ ಮೆಟ್ಟೂರು ಡ್ಯಾಂ ನಲ್ಲಿ ಹೆಚ್ಚು ನೀರಿದೆ ಎಂದು ಹೇಳಿದರು.
ನಮ್ಮ ರೈತರಿಗೆ ಬೆಳೆ ಹಾಕಬೇಡಿ ಅಂತ ಹೇಳಿದ್ದೇವೆ ಹಾಗೇ ತಮಿಳುನಾಡಿನವರು ಹೇಳಲಿ. ಅವರು ವರ್ಷಕ್ಕೆ ಮೂರು ಬೆಳೆ ಬೆಳೆಯೋದು ನೀರು ಬಿಡಿ ಅಂತ ಕ್ಯಾತೆ ತೆಗೆಯೋದು. ಇದು ಯಾವ ನ್ಯಾಯ? ಒಂದು ಇಂಚು ನೀರನ್ನು ಸಹ ತಮಿಳುನಾಡಿಗೆ ಬಿಡಬಾರದು. ಬೆಂಗಳೂರಿನವರು ಪ್ರಧಾನ ಮಂತ್ರಿ, ನೀರಾವರಿ ಪ್ರಾಧಿಕಾರಕ್ಕೆ ಒತ್ತಾಯ ಮಾಡಿ. ಕುಡಿಯುವ ನೀರಿನ ಸಮಸ್ಯೆ ಸದ್ಯದಲ್ಲೇ ಎದುರಾಗಲಿದೆ. ಬೆಂಗಳೂರಿನವರು ಟ್ವಿಟರ್ ಮೂಲಕ ಕಾವೇರಿ ನೀರಿಲ್ಲ ಎಂದು ಹ್ಯಾಶ್ ಟ್ಯಾಗ್ ಅಡಿ ಒತ್ತಾಯ ಮಾಡಿ. ಇಲ್ಲ ಬೆಂಗಳೂರಿಗೆ ನೀರನ್ನು ನಿಲ್ಲಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಅನ್ನೊದು ನನ್ನ ಒತ್ತಾಯ ಎಂದಿದ್ದಾರೆ.
ನಮ್ಮದೆ ಸರ್ಕಾರ ಇದ್ದರು ಸರಿ ನಾನು ಮಂಡ್ಯ ರೈತರ ಪರ ಇರ್ತೇನೆ. ಕಾವೇರಿ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ. ನನಗೆ ನನ್ನ ರೈತರ ಹಿತ ಮುಖ್ಯ. ನಮ್ಮ ಸರ್ಕಾರ ಇದ್ರು ನಾನು ಬೀದಿಗಿಳಿದು ಹೋರಾಟ ಮಾಡ್ತೇನೆ. ಕಾವೇರಿ ಪ್ರಾಧಿಕಾರ ಇರೋದು ಡೆಲ್ಲಿಯಲ್ಲಿ. ನಮ್ಮಲ್ಲಿ ಕೀ ಇಲ್ಲ ಅವರೇ ಬರಬೇಕು. ಕೇಂದ್ರಕ್ಕೆ ಸರ್ಕಾರ ಹಾಗೂ ಜನರು ಮನವರಿಕೆ ಮಾಡಿಕೊಡಬೇಕು. ತಮಿಳುನಾಡಿನವರು ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಇನ್ನೊಂದು ಡ್ಯಾಂ ನಿರ್ಮಾಣವಾಗಬೇಕು ಅದನ್ನ ಮನವರಿಕೆ ಮಾಡಿಕೊಡಬೇಕು ಎಂದು ಗಣಿಗ ರವಿಕುಮಾರ್ ಹೇಳಿದ್ದಾರೆ.