ಬೆಂಗಳೂರು : ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ನಗರದ ನಿವಾಸಿ ಹಾಗೂ ಆರ್‌ಎಸ್‌ಎಸ್ ಸದಸ್ಯರಾದ ತೇಜಸ್.ಎ ಅವರು ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ನ್ಯಾಯಾಲಯ ಮೂವರಿಗೆ ನೋಟಿಸ್ ಜಾರಿ ಮಾಡಿದೆ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 356(2) ಅಡಿಯಲ್ಲಿ ದೂರು ದಾಖಲಿಸಲಾಗಿದ್ದು, ಈ ಸಂಬಂಧ BNSS ನಿಯಮಾವಳಿಗಳಂತೆ ನ್ಯಾಯಾಲಯವು ದೂರುದಾರ ಮತ್ತು ಸಾಕ್ಷಿಗಳಾದ ಮಹೇಶ್ ಹಾಗೂ ಸತೀಶ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಇನ್ನೂ BNSS 2023ರ ಸೆಕ್ಷನ್ 223ರಂತೆ ಪ್ರಕರಣವನ್ನು ಸ್ವೀಕರಿಸುವ ಮೊದಲು ಆರೋಪಿಗಳ ಹೇಳಿಕೆಯನ್ನು ಆಲಿಸುವುದು ಕಡ್ಡಾಯವಾಗಿರುವುದರಿಂದ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ನ್ಯಾಯಾಲಯದ ತಿಳಿಸಿದೆ.
ಇದೇ ವೇಳೆ ಪ್ರಕರಣದ ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಲಾಗಿದ್ದು, ಸಾರ್ವಜನಿಕ ಮೈದಾನಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು 2025ರ ಅಕ್ಟೋಬರ್ 13ರಂದು ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು. ಅದೇ ದಿನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ, ಆರ್‌ಎಸ್‌ಎಸ್ ಸದಸ್ಯರೊಂದಿಗೆ ಸ್ನೇಹ ಮಾಡಬೇಡಿ, ಅವರು ಕುಟುಂಬದವರಾಗಿರಲಿ, ಸಹೋದರರಾಗಿರಲಿ, ತಂದೆ ಅಥವಾ ಮಗನಾಗಿರಲಿ. ಅವರು ವಿಷಕಾರಿಗಳು ಎಂದು ಪೋಸ್ಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ ಅಕ್ಟೋಬರ್ 14ರಂದು ಮತ್ತೊಂದು ಪೋಸ್ಟ್ ಕೂಡ ಮಾಡಿದ್ದು, ಇವು ಆರ್‌ಎಸ್‌ಎಸ್‌ನ ಗೌರವಕ್ಕೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಹೇಳಲಾಗಿದ್ದು, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳಿಗೆ ಬೆಂಬಲವಾಗಿ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಹಾಗೂ ನಲಪಾಡ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪ್ರತಿಕ್ರಿಯೆಗಳೂ ಸಂಘಟನೆಯ ಪ್ರತಿಷ್ಠೆಗೆ ಹಾನಿಯುಂಟು ಮಾಡಿವೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.



