ಕೊಳ್ಳೇಗಾಲ: ಚಾಮರಾಜನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಅಶ್ರಿತ ರೋಗಗಳ ನಿಯಂತ್ರಣ ವಿಭಾಗ ಚಿಲಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಚಿಲಕವಾಡಿ ಬೆಟ್ಟದ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಲೇರಿಯಾ ವಿರೋಧಿ ಮಾಸಾಚರಣೆ ಯಲ್ಲಿ ಚಿಲಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸುಘೋಸ್ ಎಸ್. ಗಂಜಾಂ ರವರು ಮಾತನಾಡಿ ಮಲೇರಿಯಾ, ಸೊಳ್ಳೆಯಿಂದ ಮನುಷ್ಯನಿಗೆ ಹರಡುವ ರೋಗ. ಅನಾಫಿಲಿಸ್ ಸೊಳ್ಳೆ ಕಚ್ಚಿದಾಗ ಜ್ವರ ಬರುತ್ತದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಒಂದು ಸಲ ಈ ಅನಾಫಿಲಿಸ್ ಸೊಳ್ಳೆಯು ಮನುಷ್ಯರಿಗೆ ಕಚ್ಚಿದ ಬಳಿಕ ಪ್ಲಾಸ್ಮೋಡಿಯಾ ಮನುಷ್ಯನ ಯಕೃತ್‌ನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡಿ, ಸೋಂಕು ಉಂಟು ಮಾಡುತ್ತದೆ. ಕೆಂಪು ರಕ್ತದ ಕಣಗಳನ್ನು ನಾಶಪಡಿಸುತ್ತದೆ. ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ, ಜತೆಗೆ ಮೈಕೈ ನೋವು ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಮೊದಲೇ ಇವುಗಳ ಬಗ್ಗೆ ಅರಿತು ಚಿಕಿತ್ಸೆ ಪಡೆದರೆ ಸಾವು ಸಂಭವಿಸುವುದನ್ನು ತಪ್ಪಿಸಬಹುದು. ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಂಜೆ ಸೊಳ್ಳೆಗಳು ಹೆಚ್ಚುವುದರಿಂದ ರಾತ್ರಿ ವೇಳೆ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಮೊದಲೇ ನಾವು ಸೊಳ್ಳೆಗಳ ತಾಣವನ್ನು ನಾಶಮಾಡಿ ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಲ್ಲಿ ತಿಳಿಸಿದರು.
ನಂತರ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಲೋಕೇಶ್ ಅವರು ಮಾತನಾಡಿ ಸದ್ಯದಲ್ಲೇ ಮಳೆಗಾಲ ಆರಂಭವಾಗಿರುವುದರಿಂದ ಮಳೆ ನೀರು ಮಣ್ಣಿನೊಂದಿಗೆ ಬೆರೆತು ಕುಡಿವ ನೀರಿನ ಮೂಲಗಳು ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳಾದ ವಾಂತಿ ಬೇಧಿ, ಕಾಲರಾ, ಟೈಫೈಡ್, ಕಾಮಣಿ ಗಳಂತಹ ಕಾಯಿಲೆಗಳು ಹರಡುತ್ತವೆ. ಪರಿಸರದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾಗಳಂತಹ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಸ್ವಚ್ಛತೆಗಳನ್ನು ಕಾಪಾಡಿಕೊಂಡು ಸಾಂಕ್ರಾಮಿಕ ರೋಗಗಳು ಬರದಂತೆ ಜಾಗೃತಿ ವಹಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಸುನೀಲ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಜಿ.ಕಲ್ಲೇಶ್ , ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.