Thursday, April 3, 2025
Google search engine

Homeಕ್ಯಾಂಪಸ್ ಕಲರವಮಂಡ್ಯದಲ್ಲಿ ನುಡಿ ಜಾತ್ರೆ: ಜಿಲ್ಲೆಗೆ ಇದೆ ಐತಿಹಾಸಿಕ ಹಿನ್ನಲೆ

ಮಂಡ್ಯದಲ್ಲಿ ನುಡಿ ಜಾತ್ರೆ: ಜಿಲ್ಲೆಗೆ ಇದೆ ಐತಿಹಾಸಿಕ ಹಿನ್ನಲೆ

  • ಮಾದರಹಳ್ಳಿ ಚಂದ್ರಶೇಖರ, ಶಿಕ್ಷಕ, ಮದ್ದೂರು ತಾಲೂಕು. ಮೊ.8748875762.

ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಜಿಲ್ಲೆಯ ಕನ್ನಡಾಭಿಮಾನಿಗಳಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಸಂತಸ ಮೂಡಿಸಿದೆ. ಸಕ್ಕರೆ ನಾಡು ಎಂದರೇ ಭಾರತ ದೇಶದಲ್ಲಿಯೇ ತನ್ನದೆ ಆದ ಸ್ಥಾನಮಾನ ಹೊಂದಿದೆ. ಅಲ್ಲದೇ ಅತೀ ಹೆಚ್ಚು ಕನ್ನಡ ಭಾಷೆಯನ್ನು ಮಾತನಾಡುವ ಜಿಲ್ಲೆ ಈ ನಾಡಗಿದೆ.

ಇದೇ ಡಿಸೆಂಬರ್ 20, 21 ಮತ್ತು 22 ರ ಒಟ್ಟು ಮೂರು ದಿನಗಳ ಕಾಲ ನಡೆಯುವ ಅಕ್ಷರ ಜಾತ್ರೆಗೆ ರಾಜ್ಯ ಹಾಗೂ ದೇಶದ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ನುಡಿ ಹಬ್ಬ ನುಡಿ ಜಾತ್ರೆಯನ್ನ ಯಶಸ್ವಿಗೊಳಿಸಬೇಕು. ಈ ಅಕ್ಷರ ಜಾತ್ರೆಗೆ ಆಗಮಿಸುತ್ತಿರುವ ಎಲ್ಲಾ ಕನ್ನಡ ಅಭಿಮಾನಿಗಳಿಗೂ ಸ್ವಾಗತ. ನಮ್ಮ ಮಂಡ್ಯ ವಿಶೇಷತೆ ವಿಶೇಷವಾಗಿದೆ.

ಮೂಲತಃ ಮಂಡ್ಯ ಜಿಲ್ಲೆಯು ಕಾವೇರಿ ಕಣಿವೆಯ ನಾಡು. ಕಾವೇರಿ ಮಾತೆ ಇಲ್ಲಿಯ ಜನರ ಉಸಿರು ನಾಡಿಮಿಡಿತ. ಪುರಾಣಗಳ ಪ್ರಕಾರ ಮಾಂಡವ್ಯ ಎಂಬ ಋಷಿಯು ಈ ಭಾಗದಲ್ಲಿ ವಾಸಿಸುತ್ತಿದ್ದರಿಂದ ಈ ಜಿಲ್ಲೆಗೆ ಮಂಡ್ಯ ಹೆಸರು ಬಂತು ಎಂದು ಕೂಡ ಹೇಳುತ್ತಾರೆ.ಮೈಸೂರು ಜಿಲ್ಲೆಯ ಒಂದು ಭಾಗವಾಗಿದ್ದ ಮಂಡ್ಯವು 1938ರಲ್ಲಿ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಮಂಡ್ಯ ಜಿಲ್ಲೆಯಾಗಿ ಉದಯವಾಯಿತು. ಜಿಲ್ಲೆಯು ಏಳು ತಾಲೂಕುಗಳನ್ನು ಒಳಗೊಂಡಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಭೌತಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಇಡೀ ರಾಜ್ಯ ಮತ್ತು ದೇಶಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ.

ಮೊದಲಿಗೆ ಎಲ್ಲಾ ತಾಲೂಕುಗಳ ಬಗೆ ಸಂಕ್ಕ್ಷಿಪ್ತವಾಗಿ ನೋಡುವುದಾದರೆ, ಶ್ರೀರಂಗಪಟ್ಟಣ ಇದು ಮೈಸೂರು ರಾಜ್ಯವಾಗಿದ್ದ, ವೇಳೆ ರಾಜಧಾನಿಯಾಗಿತ್ತು. ದಸರಾ ಉತ್ಸವ ಆರಂಭವಾಗಿದ್ದೆ, ಶ್ರೀರಂಗಪಟ್ಟಣದಲ್ಲಿ. ಪ್ರಸಿದ್ಧವಾದ ಕೃಷ್ಣರಾಜಸಾಗರ ಅಣೆಕಟ್ಟು (ಕನ್ನಂಬಾಡಿ ಅಣೆಕಟ್ಟು) ಹಾಗೂ ಬೃಂದಾವನ ಇಲ್ಲಿದೆ. ಕಾವೇರಿ ನದಿ ಕವಲೊಡೆಯುವ ಎಲ್ಲಾ ಸ್ಥಳಗಳಲ್ಲಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನವಿರುವುದು ಕೂಡ ಮಹತ್ವವಾಗಿದೆ. ರಂಗನತಿಟ್ಟು ಪಕ್ಷಿಧಾಮವಿದೆ, ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ದರಿಯಾದೌಲತ್ ಮತ್ತು ಜಮ್ಮು ಮಸೀದಿ ಇದೆ. ಇನ್ನಾ ಮಂಡ್ಯ ತಾಲೂಕಿನ ಬಗೆ ನೋಡುವುದಾದರೆ ಜಿಲ್ಲಾ ಕೇಂದ್ರ ಸ್ಥಾನವಾಗಿದ್ದು, ಕರ್ನಾಟಕದ ಮೊದಲ ಕಾರ್ಖಾನೆ Mysore sugar company (Mysugar) ಹೊಂದಿದೆ.

ಮದ್ದೂರು ವಡೆಗೆ ಪ್ರಸಿದ್ಧವಾದ ಮದ್ದೂರು ತಾಲೂಕಿನ ಬಗ್ಗೆ ನೋಡುವುದಾದರೆ, 1938ರಲ್ಲಿ
ಟಿ.ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸ್ಮರಣಾರ್ಥ, ಸತ್ಯಗ್ರಹ ಸೌದವಿದೆ. ಕರ್ನಾಟಕ ರಾಜ್ಯದ ಮೊದಲ ಉಪಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರವರ ಊರು ಸೋಮನಹಳ್ಳಿಯಾಗಿದೆ. ಇದಲ್ಲದೆ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ತವರೂರು ದೊಡ್ಡಅರಸಿಕೆರೆಯಾಗಿದೆ.

ಮಳವಳ್ಳಿ ತಾಲೂಕಿಗೆ ಬರುವುದಾದರೆ ಇಡೀ ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಒದಗಿಸಲು ಪ್ರಾರಂಭವಾದ ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಗೊಂಡಿದ್ದು, ಕಾವೇರಿ ನದಿಗೆ 1902 ರಲ್ಲಿ ಇಲ್ಲಿಂದಲೇ 1905ರಲ್ಲಿ ಬೆಂಗಳೂರು ನಗರಕ್ಕೆ ವಿದ್ಯುತ್ ಪೂರೈಸಿದ್ದು. ಗಗನಚುಕ್ಕಿ ಜಲಪಾತ ಇರುವುದು ಇಲ್ಲೇ . ಹಾಗೂ ಶಿವನಸಮುದ್ರದಲ್ಲಿ ಮಧ್ಯರಂಗ ದೇವಸ್ಥಾನವಿದೆ.ವೈಷ್ಣವ ತಾಣ ಹಾಗೂ ಚೆಲುವ ನಾರಾಯಣಸ್ವಾಮಿ ದೇವಸ್ಥಾನ ಮತ್ತುವೈರ ಮುಡಿ ಉತ್ಸವ ನಡೆಯುವುದು ಇದೇ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ, ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರಾದ ರಾಮನುಜಾಚಾರ್ಯರು, ಮೇಲುಕೋಟೆಯಲ್ಲಿ ವೈಷ್ಣವ ಮತ ಸ್ಥಾಪಿಸಿ 20 ವರ್ಷಗಳ ಕಾಲ ನೆಲೆಸಿದ್ದರು. ಮತ್ತೊಬ್ಬ ರೈತ ಹೋರಾಟಗಾರರಾದ ಕೆ.ಎಸ್. ಪುಟ್ಟಣ್ಣಯ್ಯನವರ ಸ್ವಂತ ತಾಲೂಕು. ಪುಸ್ತಕದ ಮನೆ ಅಂಕೇಗೌಡ್ರು, ದೊಡ್ಡ ಮನೆಯಲ್ಲಿ ಪುಸ್ತಕ ಸಂಗ್ರಹ ಮಾಡಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಜೈಲಲಿತಾ ರವರ ವಂಶದವರು ಮೂಲ ಮೇಲುಕೋಟೆ. ನಾಗಮಂಗಲ ತಾಲೂಕು ನೋಡುವುದಾದರೆ ಪ್ರಸಿದ್ಧವಾದ ಆದಿಚುಂಚನಗಿರಿ ಮಠ ಮತ್ತುಆದಿಚುಂಚನಗಿರಿ ನವಿಲುಧಾಮ ಇದೆ. ರಾಮನಗರ ಜಿಲ್ಲೆಯಲ್ಲಿ ಸ್ಥಾಪಿಸಿರುವ ಜಾನಪದ ಲೋಕ ಸಂಸ್ಥಾಪಕ, ಜಾನಪದ ತಜ್ಞರಾದ ಎಚ್.ಎಲ್ ನಾಗೇಗೌಡರು ಇದೇ ತಾಲೂಕು. ಮೈಸೂರು ಮಲ್ಲಿಗೆಯ ಕವಿ ಕೆಎಸ್ ನರಸಿಂಹಸ್ವಾಮಿರವರ ತವರು ಕಿಕ್ಕೇರಿ ಹಾಗೂ ಪಂಪ ಪ್ರಶಸ್ತಿ ವಿಜೇತ ಕವಿ ಎ.ಎನ್. ಮೂರ್ತಿ ರಾವ್ ಅಕ್ಕಿ ಹೆಬ್ಬಾಳುನವರು ಹಾಗೂ ಕವಿ ಪುತಿನ ರವರೂ ಹಾಗೂ ಕರ್ನಾಟಕದ ಮತ್ತೊಬ್ಬ ರೈತ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹುಟ್ಟಿದ ಊರು ಬೂಕನಕೆರೆ. ಕೆ.ಆರ್.ಪೇಟೆ ತಾಲೂಕಿನವರು.

ಜಿಲ್ಲೆಯ ಜನರು ಕಲಾಪ್ರಿಯರು, ಕಲಾರಾಧಕರು ಕಲಾ ಪೋಷಕರು. ಪ್ರತಿಯೊಂದು ಊರಿನಲ್ಲೂ ಕಲಾ ಪೋಷಕ ಮಂಡಳಿಗಳನ್ನು ಸ್ಥಾಪನೆ ಮಾಡಿಕೊಂಡು ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ಹಬ್ಬ ಹರಿದಿನಗಳಲ್ಲಿ ಪ್ರದರ್ಶಿಸುತ್ತಾರೆ. ಕಲೆಗೆ ಮತ್ತು ಕಲೆಗಾರರಿಗೆ ಪ್ರೋತ್ಸಾಹಿಸುತ್ತಾರೆ. ಒಟ್ಟಾರೆಯಾಗಿ ಜಿಲ್ಲೆಯ ಜನರು ರಂಗಭೂಮಿ ಮತ್ತು ನಾಟಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಜಿಲ್ಲೆಯ ಜನರ ಕೊಡುಗೆ ಅಪರಿಮಿತ. ಹಾಗೆ ನೋಡುವುದಾದರೆ ಮಂಡ್ಯ ಎಂದರೆ ತಕ್ಷಣ ನೆನಪಿಗೆ ಬರುವುದು ಮಂಡ್ಯದ ಗಂಡು ಅಂಬರೀಶ್, ನಿರ್ದೇಶಕ ಜೋಗಿ ಪ್ರೇಮ್, ಸಾಹಿತಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್, ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಹೀಗೆ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಸಾಕಷ್ಟು ಕಲಾವಿದರುಗಳನ್ನ ಪಟ್ಟಿ ಮಾಡಬಹುದು. ಇವರುಗಳು ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

ಜಿಲ್ಲೆಯ ಪ್ರತಿ ಊರಿನಲ್ಲೂ ಕಲೆಗೆ ಹೆಚ್ಚು ಮಹತ್ವ ಹಾಗೂ ಪ್ರೋತ್ಸಾಹವಿದೆ ವಿವಿಧ ತಂಡಗಳನ್ನು ಕಟ್ಟಿಕೊಂಡು,.ಕೋಲಾಟ ಪ್ರದರ್ಶನ, ಪೂಜಾ ಕುಣಿತ ಮತ್ತು ಅಲಂಕಾರಗೊಂಡ ದೇವರುಗಳನ್ನು ಹೊತ್ತು ಪ್ರದರ್ಶನ ಮಾಡುತ್ತಾರೆ.ಸೋಬಾನೆ ಪದ ಹೇಳುವವರು ಸಂಖ್ಯೆಯೇನು ಕಡಿಮೆ ಇಲ್ಲ.
1974ರಲ್ಲಿ 48ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾದ ಜಯದೇವಿ ತಾಯಿ ಲಿಗಾಡೆರವರ ಅಧ್ಯಕ್ಷತೆಯಲ್ಲಿ ಹಾಗೂ ಎರಡನೇ ಬಾರಿಗೆ 1993ರಲ್ಲಿ ಚದುರಂಗ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಮ್ಮ ಜಿಲ್ಲೆಯಲ್ಲಿ ನೆರವೇರಿತು. ಈಗ ಗೋ.ರ.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಮೂರನೇ ಬಾರಿಗೆ ನಮ್ಮ ಜಿಲ್ಲೆಗಯಲ್ಲಿ ಆಯೋಜನೆಗೊಂಡಿದೆ. ಜಿಲ್ಲೆಯ ಎಲ್ಲಾ ಕನ್ನಡ ಅಭಿಮಾನಿಗಳು ನುಡಿ ಜಾತ್ರೆಯನ್ನ ಹಬ್ಬದಂತೆ ಆಚರಿಸಿ ಯಶಸ್ವಿಗೊಳಿಸೋಣ.

RELATED ARTICLES
- Advertisment -
Google search engine

Most Popular