ರಾಮನಗರ: ಭಾರತದ ವಿಜ್ಞಾನಿ, ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪಿ.ಸಿ ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ ನಿಮಿತ್ತ ಪ್ರತಿ ವರ್ಷ ಜೂನ್ 29ನ್ನು ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು, ಜೂ. 29ರಂದು ರಾಮನಗರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಸಾಂಖ್ಯಿಕ ದಿನಚಾರಣೆಯನ್ನು ಆಚರಿಸಲಾಯಿತು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್. ಕೃಷ್ಣಮೂರ್ತಿ ಅವರು ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸುಸ್ಥಿರ ಅಭಿವೃದ್ಧಿಯನ್ನು 2030ರೊಳಗೆ ಸಾಧಿಸಬೇಕಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವು ಸೂಚಿಸಿದರುವ 17 ಸುಸ್ಥಿರ ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ಸಭೆಯ ಗಮನ ಸೆಳೆದರು. ಬಹುಮುಖ್ಯವಾಗಿ ಬಡತನ ನಿರ್ಮೂಲನೆ, ಹಸಿವು ಮುಕ್ತ, ಉತ್ತಮ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಹಾಗೂ ಇನ್ನಿತರ ಸುಸ್ಥಿರ ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ಉಪನ್ಯಾಸ ನೀಡಿ ದೇಶದ ಸರ್ವಾಂಗೀಣ ಪ್ರಗತಿಗೆ ಅಗತ್ಯವಾದ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು 2030ರೊಳಗೆ ತಲುಪಲು ಸಾಧ್ಯವೆಂದು ಆಶಯ ವ್ಯಕ್ತಪಡಿಸಿದರು.
ಸಾಂಖ್ಯಿಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವೆಲ್ಲರು ಪ್ರಾಥಮಿಕ ಹಂತದ ಅಂಕಿ ಅಂಶ (ಪ್ರೈಮರಿ ಡಾಟಾಸ್) ಗಳನ್ನು ಕೆಲ ಹಾಕುವಲ್ಲಿ ಉತ್ತಮ ಗುಣಮಟ್ಟದ ಹಾಗೂ ನಿಖರವಾದ ಅಂಕಿ ಅಂಶಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೂಪಿಸುವ ಯೋಜನೆಗಳಿಗೆ ಸಹಕಾರಿಯಾಗಿರುವುದರಿಂದ ಸಮಾಜದ ಕಟ್ಟಕಡೆಯ ನಾಗರೀಕರಿಗೂ ಯೋಜನೆಯ ಪ್ರಯೋಜನ ತಲುಪುತ್ತದೆ ಹಾಗೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳುತ್ತದೆ. ಆದ್ದರಿಂದ ಪ್ರಾಥಮಿಕ ಅಂಕಿ ಅಂಶ (ಪ್ರೈಮರಿ ಡಾಟಾಸ್) ಗಳು ಸಂಗ್ರಹಣೆಯು ಅತೀ ಪ್ರಮುಖವಾಗಿದ್ದು, ಸಾಂಖ್ಯಿಕ ಸಿಬ್ಬಂದಿಗಳು ಈ ಕುರಿತು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.