ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಅಡಿಕೆ ಕಳ್ಳತನದ 4 ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಸುಮಾರು 4,15,925/- ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ, ಪುತ್ತೂರು ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿ ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ ಸುಮಾರು 23 ಗೋಣಿ ಸುಲಿಯದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ ರವರ ನೇತೃತ್ವದ ತನಿಖಾ ತಂಡವು ಆರೋಪಿಗಳಾದ ಶ್ರವಣ್ ಕೆ, (20), ಜಯಚಂದ್ರ, (21), ಅಶೋಕ, (24), ಪುನೀತ್ (20) ಎಂಬವರನ್ನು ಬಂಧಿಸಿ, ಬಂಧಿತರಿಂದ ಸುಮಾರು 1,55,925/- ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 4,15,925/- ಆಗಿರುತ್ತದೆ.
