ಮಡಿಕೇರಿ : ಮಹಾತ್ಮ ಗಾಂಧೀಜಿ ಅವರು ವಿಶ್ವದಲ್ಲಿ ನಿರಂತರ ಶಾಂತಿಗಾಗಿ ಶ್ರಮಿಸಿದರು. ಗಾಂಧೀಜಿ ಅವರು ಸತ್ಯ ದರ್ಶನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಗಾಂಧೀಜಿಯವರ ಬದುಕಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ವತಿಯಿಂದ ನಗರಸಭೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಪದವಿ ಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ ಇಲಾಖೆಗಳ ಹಾಗೂ ಸರ್ವೋದಯ ಸಮಿತಿ, ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಹಕಾರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 154 ನೇ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 119 ನೇ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರ ತ್ಯಾಗವನ್ನು ಯಾರೂ ಮರೆಯುವಂತಿಲ್ಲ. ಮಹಾತ್ಮ ಗಾಂಧೀಜಿ ಅವರ ಜೀವನ ಕುರಿತು ಎಷ್ಟು ಬಾರಿ ಓದಿದರೂ ಗಾಂಧೀಜಿ ಅವರು ಪ್ರತಿಪಾದಿಸಿದ ಜೀವನ ಮೌಲ್ಯ ಸತ್ಯ, ಅಹಿಂಸೆ ಹಾಗೂ ಆತ್ಮಬಲದ ಕುರಿತು ಪ್ರತಿಯೊಬ್ಬರೂ ತಿಳಿಯಬೇಕಿರುವುದು ಬಹಳಷ್ಟು ಇದೆ ಎಂದರು.
ಮಹಾತ್ಮ ಗಾಂಧೀಜಿ ಅವರು ‘ನನ್ನ ಜೀವನವೇ, ನನ್ನ ಸಂದೇಶ’ ಎಂಬುದನ್ನು ಸಾರಿದರು. ಮಹಾತ್ಮ ಗಾಂಧೀಜಿಯವರ ಸರಳ ಮತ್ತು ಶಾಂತಿಯುತ ಜೀವನವನ್ನು ನಾವೆಲ್ಲರೂ ಅನುಸರಿಸುವಂತಾಗಬೇಕು. ಮಹಾತ್ಮ ಗಾಂಧೀಜಿ ಅವರು ನಡೆದು ಬಂದ ಹಾದಿಯಲ್ಲಿ ಮುನ್ನಡೆಯಬೇಕು ಎಂದರು. ಬಾಪೂಜಿ ಎಂದೇ ಪ್ರಖ್ಯಾತರಾದ ಮಹಾತ್ಮ ಗಾಂಧೀಜಿ ಅವರು ಸತ್ಯಾಗ್ರಹ ಹಾಗೂ ಅಹಿಂಸೆ ಎಂಬ ಅಸ್ತ್ರಗಳಿಂದ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ‘ಜೈಜವಾನ್ ಜೈಕಿಸಾನ್’ ಎಂಬ ಸಂದೇಶ ಸಾರುವ ಮೂಲಕ ರಾಷ್ಟ್ರದಲ್ಲಿ ಸೇನೆ ಹಾಗೂ ಕೃಷಿಯ ಮಹತ್ವದ ಬಗ್ಗೆ ವರ್ಣಿಸಿದ್ದಾರೆ ಎಂದು ಡಾ.ಮಂತರ್ ಗೌಡ ಅವರು ಹೇಳಿದರು.
ನಗರಸಭೆ ಅಧ್ಯಕ್ಷ ಅನಿತಾ ಪೂವಯ್ಯ ಅವರು ಮಾತನಾಡಿ ಗಾಂಧೀಜಿ ಅವರ ತತ್ವಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆ ದಿಸೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸತ್ಯ, ಅಹಿಂಸೆ ಮತ್ತು ಶಾಂತಿ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಸತ್ಯ ಶೋಧನೆಯಿಂದ ಮಾತ್ರ ಗುರಿ ತಲುಪಲು ಸಾಧ್ಯ ಎಂಬುದನ್ನು ಸಾರಿ ಹೇಳಿದ್ದರು ಎಂದರು.