ಹೆಲ್ಮೆಟ್ ಅಭಿಯಾನ ಮತ್ತು ಸಂಚಾರ ಅರಿವು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
ನಂಜನಗೂಡು: ಹೆಲ್ಮೆಟ್ ರಹಿತ ಪ್ರಯಾಣ, ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ದಿನನಿತ್ಯ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮತ್ತು ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಿ, ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಗೋವಿಂದರಾಜು ಹೇಳಿದರು.
ಅವರು ನಗರದ ಹುಲ್ಲಹಳ್ಳಿ ವೃತ್ತದ ಬಳಿ ಸಂಚಾರಿ ಪೊಲೀಸ್ ಠಾಣೆ, ಪಟ್ಟಣ ಪೊಲೀಸ್ ಠಾಣೆ ವತಿಯಿಂದ ಏರ್ಪಡಿಸಿದ್ದ ಹೆಲ್ಮೆಟ್ ಅಭಿಯಾನ ಮತ್ತು ಸಂಚಾರ ಅರಿವು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ಯುವಕರು ಸಂಚಾರಿ ನಿಯಮಗಳನ್ನು ಪಾಲಿಸದೆ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುವುದು, ಅಲ್ಲದೆ ಹೆಲ್ಮೆಟ್ ರಹಿತ ಪ್ರಯಾಣ ಮಾಡುವುದರಿಂದಾಗಿ ದಿನನಿತ್ಯ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸಲು ಮುಂದಾಗಬೇಕು, ಜೊತೆಗೆ ಹೆಲ್ಮೆಟ್ ಪೊಲೀಸರು ಹಿಡಿಯುತ್ತಾರೆ ಎಂಬ ಭಯದಿಂದ ಧರಿಸದೆ ನಿಮ್ಮ ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಲು ಬಳಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಜಯಪ್ರಕಾಶ್ ಮಾತನಾಡಿ ಕುಡಿದು ವಾಹನ ಚಾಲನೆ ಮಾಡುವುದು ಅಪರಾಧ, ಅಲ್ಲದೆ ಅಪ್ರಾಪ್ತರ ಕೈಗೆ ವಾಹನಗಳನ್ನು ನೀಡುವುದು ಸಹ ಅಪರಾಧ ಇದರಿಂದಾಗಿ ಅಪಘಾತ ಸಂಭವಿಸಿ ಕುಟುಂಬಗಳು ಬೀದಿ ಪಾಲಾಗಿವೆ. ಆದ್ದರಿಂದ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಜೊತೆಗೆ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು.
ತಪ್ಪಿದಲ್ಲಿ ದಂಡ ತೆರಬೇಕಾಗುತ್ತದೆ. ಆದ್ದರಿಂದ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಿ, ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಿಟಿಜನ್ ಶಾಲೆಯ ವಿದ್ಯಾರ್ಥಿಗಳ ಜೊತೆಗೂಡಿ ನಗರದ ಆರ್‌ಪಿ ರಸ್ತೆ, ಎಂಜಿಎಸ್ ರಸ್ತೆ , ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥವನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಪಿಎಸ್ಐ ಗಳಾದ ಯಾಸ್ಮಿನ್ ತಾಜ್, ಪ್ರಕಾಶ್ ಸಿದ್ದಪ್ಪ ಮದ್ಲೂರು, ಎಎಸ್ ಐ ಪಾಪೇಗೌಡ, ಸಿಬ್ಬಂದಿಗಳಾದ ಅನಂತು, ಶರಣಪ್ಪ ಸೇರಿದಂತೆ ಹಲವಾರು ಪ್ರಮುಖರು ಇದ್ದರು.