Thursday, April 10, 2025
Google search engine

Homeಅಪರಾಧಕಾನೂನುಮನೆಯೂಟ ಪಡೆಯುವುದಕ್ಕೆ ನಟ ದರ್ಶನ್‌ ಗೆ ಆಕ್ಷೇಪ: ವಕೀಲ ಅಮೃತೇಶ್‌ಗೆ ದಂಡದ ಎಚ್ಚರಿಕೆ ನೀಡಿದ...

ಮನೆಯೂಟ ಪಡೆಯುವುದಕ್ಕೆ ನಟ ದರ್ಶನ್‌ ಗೆ ಆಕ್ಷೇಪ: ವಕೀಲ ಅಮೃತೇಶ್‌ಗೆ ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್‌

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ತೂಗದೀಪ ಶ್ರೀನಿವಾಸ್‌ಗೆ ಮನೆ ಊಟ ಒದಗಿಸಲು ಅನುಮತಿ ನೀಡದಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿರುವ ಅರ್ಜಿಗೆ ಬುಧವಾರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಅರ್ಜಿದಾರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ದರ್ಶನ್‌ಗೆ ಮನೆಯಿಂದ ಊಟ ಮತ್ತು ಹಾಸಿಗೆ ಸೌಲಭ್ಯ ಪಡೆಯಲು ಅನುಮತಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಎನ್‌ ಪಿ ಅಮೃತೇಶ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿ ಪರಿಶೀಲಿಸಿದ ಪೀಠವು “ದರ್ಶನ್‌ಗೆ ಮನೆ ಊಟ ಕಲ್ಪಿಸುವುದಕ್ಕೆ ವಿರೋಧ ಮಾಡಲು ಅರ್ಜಿದಾರರು ಯಾರು?” ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲ ಅಮೃತೇಶ್‌ ಅವರು “ದರ್ಶನ್‌ ಮನೆಯಿಂದ ಊಟ ಪಡೆಯಲು ಅನುಮತಿ ನೀಡದಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಮನವಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಕೋರಿದರು.

ಇದರಿಂದ ಅಸಮಾಧಾನಗೊಂಡ ಪೀಠವು “ಪ್ರಚಾರಕ್ಕಾಗಿ ಇಂತಹ ಅರ್ಜಿ ದಾಖಲಿಸಲಾಗಿದೆಯೇ? ಅಷ್ಟಕ್ಕೂ ಜೈಲಿನಲ್ಲಿರುವ ಆರೋಪಿಗೆ ಮನೆ ಊಟ ಕೊಡುವುದನ್ನು ವಿರೋಧಿಸಲು ಅರ್ಜಿದಾರರಿಗೆ ಯಾವ ಅಧಿಕಾರವಿದೆ? ದರ್ಶನ್‌ಗೆ ಮನೆ ಊಟ ನೀಡಲು ಸರ್ಕಾರ ಅನುಮತಿಸಿದರೆ, ಅದನ್ನು ಪ್ರಶ್ನಿಸಿಕೊಂಡು ಅರ್ಜಿ ಸಲ್ಲಿಸಬಹುದು. ಆದರೆ, ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಹಂತದಲ್ಲಿ ನೀವು ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದೀರಿ. ದಂಡ ವಿಧಿಸಿ ಅರ್ಜಿ ವಜಾ ಮಾಡಲಾಗುವುದು” ಎಂದು ಎಚ್ಚರಿಸಿತು.

ಆಗ ಅಮೃತೇಶ್‌ ಅವರು “ಅರ್ಜಿಯಲ್ಲಿನ ಕೋರಿಕೆಯ ಬಗ್ಗೆ ಪೀಠಕ್ಕೆ ಮನವರಿಕೆ ಮಾಡಿಕೊಡಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಈ ಹಿನ್ನೆಲೆಯಲ್ಲಿ ಪೀಠವು ಅರ್ಜಿ ವಿಚಾರಣೆಯನ್ನು ಒಂದು ವಾರ ಮುಂದೂಡಿತು.

ಕರ್ನಾಟಕ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ-2021ರ ಅನ್ವಯ ಕೊಲೆ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಆರೋಪಿಗೆ ಮನೆ ಊಟ ನೀಡಲು ಅವಕಾಶವಿಲ್ಲ. ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌, ಮನೆ ಉಟ ಪಡೆಯಲು ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಪರಿಗಣಿಸದಂತೆ ಅರ್ಜಿದಾರ ಅಮೃತೇಶ್‌ 2024ರ ಜುಲೈ 31ರಂದು ರಾಜ್ಯ ಸರ್ಕಾರ, ಬೆಂಗಳೂರು ಕೇಂದ್ರ ಕಾರಾಗೃಹ ಅಧೀಕ್ಷಕರು, ಬೆಂಗಳೂರಿನ ಪೊಲೀಸ್‌ ಆಯುಕ್ತರು ಮತ್ತು ಪೊಲೀಸ್‌ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು. ಆ ಮನವಿ ಕುರಿತು ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದರಿಂದಾಗಿ ತಮ್ಮ ಮನವಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅಮೃತೇಶ್‌ ಅರ್ಜಿಯಲ್ಲಿ ಕೋರಿದ್ದರು.

RELATED ARTICLES
- Advertisment -
Google search engine

Most Popular