ಮೈಸೂರು: ಶ್ರೀ ಸುತ್ತೂರು ಮಠದಲ್ಲಿ ಇದೇ ನ.೨೭ ರಂದು ಸೋಮವಾರ ಸಂಜೆ ೬.೦೦ ಗಂಟೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಬೆಳದಿಂಗಳ ಸಂಗೀತ-೨೬೧ರ ಅಂಗವಾಗಿ ಪಂ. ಪ್ರವೀಣ್ ಗೋಡ್ಗಿಂಡಿಯವರ ಬಾನ್ಸುರಿ ವಾದನವನ್ನು ಏರ್ಪಡಿಸಲಾಗಿದೆ.
ಪಂ. ಪ್ರವೀಣ್ ಗೋಡ್ಖಿಂಡಿಯವರು ರಾಷ್ಟ್ರದ ಶ್ರೇಷ್ಠ ಕಲಾವಿದರಲ್ಲೊಬ್ಬರು. ಕೊಳಲಿನತ್ತ ಆಕರ್ಷಿತರಾದ ಇವರಿಗೆ ತಂದೆ ವಿದ್ವಾನ್ ವೆಂಕಟೇಶ ಗೋಡ್ಖಿಂಡಿಯವರೇ ಮೊದಲ ಗುರುಗಳು. ಅನಂತರ ಬಾನ್ಸುರಿಯತ್ತ ಹೊರಳಿದ ಇವರ ಆಸಕ್ತಿ, ಸಾಧನೆಗಳು ಇವರನ್ನೊಬ್ಬ ಸಂಗೀತ ಮಾಂತ್ರಿಕರನ್ನಾಗಿಸಿತು. ಹೆಸರಾಂತ ಮೃದಂಗ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮರ ಮಾರ್ಗದರ್ಶನ ಪಡೆದು ಲಯ ಮತ್ತು ಲಯಕಾರಿಯಲ್ಲಿ ಅಪೂರ್ವ ಜ್ಞಾನವನ್ನು ಪಡೆದುಕೊಂಡರು. ತಂದೆಯವರಿಂದ ಕಿರಾಣಾ ಘರಾಣೆಯ ಶೈಲಿಯಲ್ಲಿ ಕಲಿತರೂ ಸ್ವಂತ ಪರಿಶ್ರಮದಿಂದ ತಂತ್ರಕಾರಿ ಶೈಲಿಯನ್ನು ಕರಗತ ಮಾಡಿಕೊಂಡರು. ಪಾಶ್ಚಾತ್ಯ ಮತ್ತು ಕರ್ನಾಟಕ ಸಂಗೀತದ ಸೂಕ್ಷ್ಮ ವೈಶಿಷ್ಟ್ಯಗಳನ್ನೂ ಅಳವಡಿಸಿಕೊಂಡಿರುವ ಮುಕ್ತ ಮನಸ್ಸಿನ ಕಲಾವಿದರು. ಪ್ರಪಂಚದಾದ್ಯಂತ ತಮ್ಮ ವಾದನದ ಮೋಡಿಯನ್ನು ಕೋಟ್ಯಂತರ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿಸಿರುವರು.
ಪಂ. ಗೋಡ್ಖಿಂಡಿಯವರಿಗೆ ಮುಂಬಯಿಯ ಸೂರ್ ಸಿಂಗಾರ್ ಸಂಸತ್ತಿನ ಸೂರಮಣಿ ಪ್ರಶಸ್ತಿ ಬಂದಾಗ ೧೬ ವರ್ಷ. ೧೮ನೆಯ ವರ್ಷಕ್ಕೆ ಆಕಾಶವಾಣಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. ೨೧ನೆಯ ವಯಸ್ಸಿಗೆ ಆಕಾಶವಾಣಿಯ ಎ ಶ್ರೇಣಿ ಕಲಾವಿದರ ಸ್ಥಾನ. ಪಂ. ಪನ್ನಾಲಾಲ್ ಘೋಷ್ ಸಂಸ್ಮರಣ ಗೌರವ ಪುರಸ್ಕಾರ; ಉಡುಪಿ ಹಾಗೂ ಶೃಂಗೇರಿ ಮಠಗಳಿಂದ ಆಸ್ಥಾನ ಸಂಗೀತ ವಿದ್ವಾನ್ ಪ್ರಶಸ್ತಿ; ಚೆನ್ನೈನ ಟ್ರಿನಿಟಿ ಮ್ಯೂಸಿಕ್ ಅಸೋಸಿಯೇಷನ್ನಿಂದ ವೇಣುಗಾನ ಮಹಾರಾಜ ಪ್ರಶಸ್ತಿ ಇವರಿಗೆ ಸಂದಿರುವ ಕೆಲವು ಪ್ರತಿಷ್ಠಿತ ಪುರಸ್ಕಾರಗಳು. ಇವರು ಬಿಇ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) ನಲ್ಲಿ ಡಿಸ್ಟಿಂಕ್ಷನ್ ಗಳಿಸಿರುವರು.
ಹಲವಾರು ಚಲನಚಿತ್ರಗಳಿಗೆ ಮತ್ತು ಟಿ.ವಿ. ಧಾರಾವಾಹಿಗಳಿಗೆ ಸಂಗೀತ ನಿರ್ದೇಶನ ನೀಡಿರುವರು. ಫ್ಯೂಷನ್ ಸಂಗೀತ ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ; ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿದ್ದರೂ, ಅತ್ಯಂತ ಸರಳ, ಸ್ನೇಹಮಯ, ಸೌಮ್ಯ ವ್ಯಕ್ತಿತ್ವವುಳ್ಳ ಸಜ್ಜನರು, ಸಂಭಾವಿತರು. ಪಂ. ಕಿರಣ್ ಗೋಡ್ಖಿಂಡಿಯವರು ಪಂ. ಪ್ರವೀಣ್ ಗೋಡ್ಖಿಂಡಿಯವರ ಸಹೋದರರು. ಇವರೂ ಸಹ ಚಿಕ್ಕ ವಯಸ್ಸಿನಿಂದಲೇ ತಂದೆ ಪಂ. ವೆಂಕಟೇಶ ಗೋಡ್ಖಿಂಡಿಯವರ ಬಳಿ ಸಂಗೀತದ ಪ್ರಾಥಮಿಕ ಪಾಠಗಳನ್ನು ಕಲಿಯತೊಡಗಿದರು. ಅನಂತರ ತಬಲ ವಾದನದಲ್ಲಿ ಆಸಕ್ತಿ ತಳೆದು ಹೈದರಾಬಾದ್ನ ತಬಲ ಮಾಂತ್ರಿಕ ಉಸ್ತಾದ್ ಶೇಖ್ ದಾವೂದರವರ ನೇರ ಶಿಷ್ಯರಾದ ಗೋವೆಯ ಪಂ. ಪ್ರಭಾಕರ್ ಚಾರಿಯವರು, ಲಾಲ್ಗಿರಿಜಿ ಗೋಸ್ವಾಮಿ, ದೆಹಲಿಯ ಉಸ್ತಾದ್ ಅಬ್ದುಲ್ಲಾ ಮತ್ತು ಧಾರವಾಡದ ಪಂ. ರಘುನಾಥ್ ನಾಕೋಡ್ ಮೊದಲಾದ ವಿದ್ವಾಂಸರುಗಳ ಮಾರ್ಗದರ್ಶನದಲ್ಲಿ ತಮ್ಮ ಸಾಧನೆಯನ್ನು ಮುಂದುವರಿಸಿದರು.
ಭಾರತದ ತಬಲ ದಿಗ್ಗಜರಾದ ಉಸ್ತಾದ್ ಝಕೀರ್ ಹುಸೇನ್, ಪಂ. ಅನಿಂದೊ ಚಟರ್ಜಿ ಮೊದಲಾದ ಖ್ಯಾತ ವಾದಕರ ಪ್ರಭಾವ ಪಂ. ಕಿರಣ್ರವರ ವಾದನದ ಮೇಲೆ ಆಗಿದೆ. ತಂದೆಯವರೊಡನೆ ಭಾರತಾದ್ಯಂತ ಪ್ರವಾಸ ಮಾಡಿದ ಫಲವಾಗಿ ಬೇರೆ ಬೇರೆ ವಿದ್ವಾಂಸರ ಶೈಲಿಯನ್ನು ಅಳವಡಿಸಿಕೊಳ್ಳುವುದು ಇವರಿಗೆ ಸಾಧ್ಯವಾಯಿತು.

ಕಳೆದ ಮೂರು ದಶಕಗಳಿಂದ ತಬಲ ವಾದನ ಕ್ಷೇತ್ರದಲ್ಲಿ ಕೀರ್ತಿ ಪಡೆದಿರುವ ಪಂ. ಕಿರಣ್ ಗೋಡ್ಖಿಂಡಿಯವರು ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ವಾದನ ಕಲೆಯನ್ನು ಪ್ರಸ್ತುತಿಪಡಿಸಿದ್ದಾರೆ. ರೇಡಿಯೋ ಮತ್ತು ದೂರದರ್ಶನದಲ್ಲಿ ಎಡೆಬಿಡದೆ ಕಾರ್ಯಕ್ರಮಗಳನ್ನು ನೀಡುವ ಇವರು ಪಂ. ಪ್ರವೀಣ್ ಗೋಡ್ಖಿಂಡಿಯವರೊಡನೆ ಕೃಷ್ಣ ಫ್ಯೂಷನ್ ಬ್ಯಾಂಡಿನ ಮೂಲಕ ವಿಶ್ವದಾದ್ಯಂತ ಕಾರ್ಯಕ್ರಮ ನೀಡಿದ್ದಾರೆ. ವಿದ್ವಾನ್ ಆನೂರು ಅನಂತಕೃಷ್ಣ ಶರ್ಮರ ಲಯಲಹರಿ ಮತ್ತು ಲಯಲಾವಣ್ಯ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿರುವರು. ತಂದೆಯವರು ಸ್ಥಾಪಿಸಿದ ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯದಲ್ಲಿ ಆಸಕ್ತರಿಗೆ ತಬಲ ಶಿಕ್ಷಣ ನೀಡುತ್ತಿದ್ದಾರೆ. ಚಲನಚಿತ್ರ ಮತ್ತು ಟಿ.ವಿ.ಗಳಿಗೆ ಸಂಗೀತ ನೀಡುವಲ್ಲಿಯೂ ಸಿದ್ಧಹಸ್ತರು. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಕೋರಿದೆ.