ಕೆ.ಆರ್.ನಗರ: ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಇಲಾಖೆಗಳಲ್ಲಿ ಮಾಹಿತಿ ನೀಡುತ್ತಿಲ್ಲ ಇದರಿಂದ ಸವಲತ್ತುಗಳು ಉಳ್ಳವರ ಪಾಲಾಗುತ್ತಿದ್ದಾವೆ ಎಂದು ಕರ್ನಾಟಕ ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ಕುಮಾರಭೋವಿ ಹೇಳಿದರು.
ತಾಲೂಕಿನ ಹೊಸೂರು ಕಲ್ಲಹಳ್ಳಿ ಗ್ರಾಮದಲ್ಲಿ ಹೋಬಳಿ ಮಟ್ಟದ ಸಂಘ ಉದ್ಘಾಟಿಸಿ ಮಾತನಾಡಿದ ಅವರು ಇಲಾಖಾ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಸವಲತ್ತು ನೀಡುತ್ತಿಲ್ಲ ಹಣದ ಆಸೆಗಾಗಿ ಉಳ್ಳವರಿಗೆ ನೀಡುತ್ತಿದ್ದಾರೆ ಎಂದು ದೂರಿದರು. ರೈತರಿಗೆ ದೊರೆಯುವ ಸರ್ಕಾರದ ಸವಲತ್ತುಗಳು ಕಛೇರಿಯ ನಾಮಫಲಕದಲ್ಲಿ ಕಾಣುವಂತೆ ಹಾಕಬೇಕು ಎಂದು ಒತ್ತಾಯಿಸಿದ ಕುಮಾರಭೋವಿ ಕೃಷಿಕರ ಸಂಘದ ಪದಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡುವುದರ ಜತೆಗೆ ಇಲಾಖಾ ಅಧಿಕಾರಿಗಳಿಗೂ ಪ್ರಶ್ನೆ ಮಾಡುವ ಪ್ರವೃತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಣಕಾಸಿನ ವಿಚಾರದಲ್ಲಿ ಸಾಕಷ್ಟು ರೈತ ಸಂಘಟನೆಗಳು ಹಾಳಾಗಿವೆ ಆದ್ದರಿಂದ ಕೃಷಿಕರ ಸಂಘ ಮಾಡಲಾಗಿದ್ದು ಸಂಘದ ಪದಾಧಿಕಾರಿಗಳು ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದ ಜಿಲ್ಲಾಧ್ಯಕ್ಷರು ಅಧಿಕಾರಿಗಳ ಬಳಿ ಹೋಗುವ ಮೊದಲು ಸಂಬಂಧ ಪಟ್ಟ ವಿಚಾರದ ಬಗ್ಗೆ ಪೂರ್ಣ ಮಾಹಿತಿ ತಿಳಿಯಬೇಕು ಎಂದು ಕಿವಿ ಮಾತು ಹೇಳಿದರು.
ಸರ್ಕಾರಿ ಕಛೇರಿಗಳಲ್ಲಿ ಲಂಚದಾವಳಿ ಕಡಿಮೆ ಮಾಡಲು ರೈತ ಸಂಘಟನೆಗಳು ಹೋರಾಟ ಮಾಡುವ ಅಗತ್ಯವಿದ್ದು ರೈತನ ಮನೆ ಬಾಗಿಲಿಗೆ ಸವಲತ್ತುಗಳು ತಲುಪುವಂತೆ ಹಾಗಬೇಕು ಆಗ ರೈತರಿಗೆ ಅನುಕೂಲವಾಗಲಿದೆ ಎಂದರಲ್ಲದೆ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಗಳಲ್ಲಿ ಇದ್ದು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವಂತಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಬಿ.ಕೆ.ನೂತನ್‌ಕುಮಾರ್, ಸಾಹಿತಿ ಭೇರ್ಯರಾಂಕುಮಾರ್, ಸಂಘದ ಗೌರವಾಧ್ಯಕ್ಷ ವೆಂಕಟೇಶ್, ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಶಂಭುಲಿಂಗಪ್ಪ, ಅರಕಲಗೂಡು ಅಧ್ಯಕ್ಷ ಸೋಮಶೇಖರ್, ಕೆ.ಆರ್.ಪೇಟೆ ಅಧ್ಯಕ್ಷ ಸತೀಶ್, ಮುಖಂಡರಾದ ಸಿದ್ದೇಗೌಡ, ಗಣೇಶ್, ಅಣ್ಣೇಗೌಡ, ಗಿರಿಜಮ್ಮ, ರಾಜುನಾಯಕ್ ಮುಂತಾದವರು ಹಾಜರಿದ್ದರು.