ಧಾರವಾಡ : ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕ್ಷೇತ್ರಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಬೇಕೆಂದು ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿಂದು ಜರುಗಿದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಸೇರಿದಂತೆ ವಿವಿಧ ಅಬಿವೃದ್ಧಿ ಇಲಾಖೆಗಳ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ-ಕಾಲೇಜು ವಿದ್ಯಾರ್ಥಿ ನಿಲಯಗಳು, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕ ಅಹವಾಲುಗಳನ್ನು ಆಲಿಸಿ ಸ್ಪಂಧಿಸುವಂತೆ ಅವರು ತಿಳಿಸಿದರು.
ಎಲ್ಲ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಟ್ಟಡಗಳ ಆವರಣದಲ್ಲಿ ಕಡ್ಡಾಯವಾಗಿ ಸಸಿ ನೆಟ್ಟು ಹಸರೀಕರಣದಲ್ಲಿ ಪಾಲ್ಗೊಳ್ಳತಕ್ಕದ್ದು, ಉದ್ಯೋಗ ಖಾತ್ರಿ ಹಾಗೂ ಇನ್ನಿತರ ಗ್ರಾಮೀಣ ಅಭಿವೃದ್ಧಿ ಯೋಜನೆಗಳಲ್ಲಿ ಕಿರುಕಾಡು ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಅನ್ಬುಕುಮಾರ ತಿಳಿಸಿದರು. ಇತ್ತಿಚೆಗೆ ಚಿತ್ರದುರ್ಗ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕಲುಷಿತ ನೀರು ಸರಬರಾಜುಗೊಂಡು, ತೀವೃ ಆರೋಗ್ಯ ಸಮಸ್ಯೆಯಿಂದ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲೂ ಸಹ ನಿಗಾ ವಹಿಸಿ ಪ್ರತಿ ಗ್ರಾಮಗಳ ನೀರು ಪರೀಕ್ಷೆಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಕಲುಷಿತ ನೀರು ಸರಬರಾಜು ಘಟನೆ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು. ಪ್ರತಿದಿನದ ನೀರು ಪೂರೈಕೆಯ ವರದಿಗಳನ್ನು ವಾಟ್ಸ್‍ಅಪ್, ಇಮೇಲ್‍ಗೆ ಹಾಕಬೇಕು. ಆಯಾ ತಾಲೂಕಾ ಅಧಿಕಾರಿಗಳು ಉಸ್ತುವಾರಿ ಮಾಡತಕ್ಕದ್ದೆಂದು ತಿಳಿಸಿದರು.
ಕಳೆದ ಒಂದು ತಿಂಗಳಿನಿಂದ ಸಾಧಾರಣ ಮಳೆಯಾಗಿದ್ದು, ಹಾಲಿ ಕೊಳವೆ ಬಾವಿಗಳ ಅಂತರ್ಜಲಮಟ್ಟ ಹೆಚ್ಚಿ ಹಾಗೂ ಟ್ಯಾಂಕರ್ ಮತ್ತು ಬಾಡಿಗೆ ಕೊಳವೆ ಬಾವಿಗಳ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ. 08 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ 05 ಬಾಡಿಗೆ ಬೋರ್‍ವೆಲ್‍ಗಳ ಮೂಲಕ ಸಮಸ್ಯೆ ಬಗೆಹರಿಸಲಾಗಿದೆಯೆಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಆಗಸ್ಟ್ 01, 2023 ರವರೆಗೆ ಶೇ.85 ರಷ್ಟು ಇ-ಕೆವೈಸಿ ಪ್ರಗತಿಯಾಗಿದ್ದು, ಬಾಕಿ ಇರುವ 18,627 ಫಲಾನುಭವಿಗಳಲ್ಲಿ 4739 ಫಲಾನುಭವಿಗಳು ಮೃತರಾಗಿದ್ದು, ವಿವರಗಳನ್ನು ಪೆÇೀರ್ಟಲ್‍ನಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗಿದ್ದು, ಶೇ.89 ರಷ್ಟು ಪ್ರಗತಿಯಾಗಿದೆ. ಉಳಿದ ಪ್ರಕರಣಗಳನ್ನು ಶೀಘ್ರವಾಗಿ ಇ-ಕೆವೈಸಿ ಮಾಡಿಸಲು ಹೆಚ್ಚು ಬಾಕಿಯಿರುವ ಗ್ರಾಮಗಳಿಗೆ ಅಧಿಕಾರಿಗಳನ್ನು ನಿಯೋಜಿಸಿ ಶೇ.100 ರಷ್ಟು ಪ್ರಗತಿ ಸಾಧಿಸಲು ಕಾರ್ಯದರ್ಶಿಗಳು ಸೂಚಿಸಿದರು. ಪಿಡಿಓಗಳು ಈ ಕಾರ್ಯದಲ್ಲಿ ಬಳಸಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.