ಬೆಂಗಳೂರು: ಕೃಷಿ ಹಾಗೂ ಜಲಾನಯನ ಇಲಾಖೆ ವತಿಯಿಂದ ನಬಾರ್ಡ್ ಅನುದಾನದಲ್ಲಿ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿರವರು ಸೂಚನೆ ನೀಡಿದ್ದಾರೆ.
ಇಂದು ವಿಕಾಸಸೌಧದ ಕಚೇರಿಯಲ್ಲಿ ನಬಾರ್ಡ್ ಯೋಜನೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಸಹಿಸುವುದಿಲ್ಲ. ನಿರ್ಲಕ್ಷ್ಯ ವಹಿಸುವ ಅಧಿಕಾರಿ ಹಾಗೂ ಗುತ್ತಿಗೆದಾರರನ್ನೇ ಇದಕ್ಕೆ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಶೇಕಡಾ ೮೦ ರಷ್ಟು ಕಾಮಗಾರಿ ಕಟ್ಟಡಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ ಸಚಿವರು ಈಗಾಗಲೇ ಖರ್ಚಾಗಿರುವ ಅನುದಾನಕ್ಕೆ ಬಳಕೆ ಪ್ರಮಾಣ ಪತ್ರ ನೀಡಿ ಉಳಿಕೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.
೩೫ ರೈತ ಸಂಪರ್ಕ ಕೇಂದ್ರ ಹಾಗೂ ೨೪ ಗೋದಾಮು ಹಾಗೂ ವಿಶ್ವವಿದ್ಯಾನಿಲಯಗಳ ಹಲವು ಕಟ್ಟಡ ಕಾಮಗಾರಿಗಳನ್ನು ನಬಾರ್ಡ್ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದ್ದು ಪ್ರತಿ ಕಟ್ಟಡವಾರು ಪ್ರಗತಿ ಬಗ್ಗೆ ಸಚಿವರು ವಿಸ್ತೃತವಾಗಿ ಪರಿಶೀಲನೆ ನಡೆಸಿದರು. ಕೃಷಿ ಆಯುಕ್ತರಾದ ವೈ.ಎಸ್.ಪಾಟೀಲ್, ಕೃಷಿ ನಿರ್ದೇಶಕ ಡಾ.ಪುತ್ರ, ಜಲಾನಯನ ಇಲಾಖೆ ನಿರ್ದೇಶಕ ಶ್ರೀನಿವಾಸ ಮತ್ತಿತರು ಉಪಸ್ಥಿತರಿದ್ದರು.