ಬೆಂಗಳೂರು: ಜನರು ಕಾನೂನು ಬಾಹಿರವಾಗಿ ಮನೆಗಳನ್ನು ಕಟ್ಟಿಕೊಳ್ಳಬಾರದು. ಕಟ್ಟಡ ನಿರ್ಮಾಣಕ್ಕೆ ಮುಂಚಿತವಾಗಿ ಅನುಮತಿ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಗಳುಗಳ ಆರೋಗ್ಯ ವಿಚಾರಿಸಿದರು.
ಕಾಮಗಾರಿ ನಿಲ್ಲಿಸುವಂತೆ ನೋಟಿಸ್ ನೀಡಿದ ನಂತರವೂ ಕಟ್ಟಡ ಮಾಲಿಕರು ಹಾಗೂ ಗುತ್ತಿಗೆದಾರರು ಕಾಮಗಾರಿಯನ್ನು ನಿಲ್ಲಿಸದ ಕಾರಣ ಈ ಘಟನೆ ನಡೆದಿದೆ. ಇಂತಹ ಘಟನೆಗಳು ಮರುಕಳಿಸದಿರಲು ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಮುಂಚಿತವಾಗಿ ಅನುಮತಿ ಪಡೆಯಬೇಕು. ಜತೆಗೆ ಎಇಇ ನಿಂದ ಸೂಕ್ತ ಪರಿಶೀಲನೆಯಾಗಬೇಕು. ಇದರ ಜೊತೆಗೆ ಕಳಪೆ ಕಾಮಗಾರಿ ಮಾಡದೆ ಕಟ್ಟಡದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಅಧಿಕಾರಿಗಳೇ ಹೊಣೆ: ಈ ಕಟ್ಟಡ ಕುಸಿತ ನಡೆದಿರುವುದು ಕಳಪೆ ಕಾಮಗಾರಿಯಿಂದಾಗಿದೆಯೇ ಹೊರತು ಮಳೆಯ ಕಾರಣದಿಂದಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಧಿಕೃತ ಕಟ್ಟಡಗಳಿಗೆ ಅನುಮತಿ ನೀಡಬಾರದು. ಒಂದು ವೇಳೆ ನಿರ್ಮಿಸಿದರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚನೆ ನೀಡಿದರು.
3 ಸಾವಿರ ಕೋಟಿ ರೂ. ಸಾಲ: ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿಪತ್ತು ನಿರ್ವಹಣೆ ಗಾಗಿ 3 ಸಾವಿರ ಕೋಟಿ ರೂ. ಸಾಲ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದು ರೆವಿನ್ಯೂ ಬಡಾವಣೆಯಾಗಿದ್ದು, ಈ ಕಟ್ಟಡ ವನ್ನು ಪರವಾನಗಿ ಪಡೆಯದೆ ನಿರ್ಮಿಸಲಾಗಿದೆ. ಅನ ಧಿಕೃತ ಕಾಮಗಾರಿ ಎಂದು ನೋಟೀಸು ನೀಡಲಾಗಿ ದ್ದರೂ, ನಿರ್ಮಾಣ ಮಾಡಿರುವುದರಿಂದ, ಸಂಬಂಧಪಟ್ಟ ಎಇಇ ಯನ್ನು ಅಮಾನತುಗೊಳಿಸಲಾಗಿದೆ. ಈ ಪ್ರದೇ ಶದ ವ್ಯಾಪ್ತಿಗೆ ಬರುವ ವಿಭಾಗೀಯ ಅಧಿಕಾರಿಗೂ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರಿಗೂ ನೋಟಿಸ್ ಜಾರಿಗೊಳಿಸಲು ಸೂಚಿಸಲಾಗಿದೆ ಎಂದರು.
ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಘಟನೆಯಲ್ಲಿ ಗಾಯ ಗೊಂಡವರ ಚಿಕಿತ್ಸೆಯನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಹೇಳಿದರು. ಸಾವನ್ನಪ್ಪಿರುವ 8 ಜನರಿಗೆ ಕಾರ್ಮಿಕ ಇಲಾಖೆಯಿಂದ ತಲಾ ತಲಾ 2 ಲಕ್ಷ ರೂ., ಬಿಬಿಎಂಪಿಯಿಂದ 3 ಲಕ್ಷ ರೂ. ಸೇರಿ ಒಟ್ಟು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಣೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.