ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮಳೆ ಹಾನಿಯಿಂದ ಗುಂಡಿ ಬಿದ್ದು ಹಾಳಾಗಿರುವ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗಳ ಗುಂಡಿ ಮುಚ್ಚಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದಿಂದ ಹುಣಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು ತುರ್ತು ಕಾಮಗಾರಿ ಮಾಡಿ ಜನ ಮತ್ತು ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಸೂಚಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ಷೇತ್ರದ ವಿವಿದ ರಸ್ತೆಗಳ ಅಭಿವೃದ್ದಿ ಮತ್ತು ಕ್ರೀಡಾಂಗಣದ ಕಾಮಗಾರಿಗೆ ೨೫ ಕೋಟಿ ಹಣ ಬಿಡುಗಡೆಯಾಗಿದ್ದು ಶೀಘ್ರದಲ್ಲಿಯೆ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಪುರಸಭೆ ವೃತ್ತದಿಂದ ಮದುವನಹಳ್ಳಿ ಮಾರ್ಗವಾಗಿ ಬ್ಯಾಡರಹಳ್ಳಿ ಮಳಲಿ ಹೊಸಕೋಟೆ ಸಂಪರ್ಕ ರಸ್ತೆಗೆ ೨೨ ಕೋಟಿ, ಭೇರ್ಯ ಮುಖ್ಯ ರಸ್ತೆಯಿಂದ ಬಟಿಗನಹಳ್ಳಿ- ಮಿರ್ಲೆ ಸಂಪರ್ಕ ರಸ್ತೆಗೆ ೩ ಕೋಟಿ, ಮಾಯಗೌಡನಹಳ್ಳಿಯಿಂದ-ಹೊಸಕೋಟೆ ಸಂಪರ್ಕ ರಸ್ತೆಗೆ ೫ ಕೋಟಿ, ಸಾಲಿಗ್ರಾಮ- ಹಳ್ಳಿಮೈಸೂರು ಮುಖ್ಯ ರಸ್ತೆಯಿಂದ ತಂದ್ರೆಕೊಪ್ಪಲು ರಸ್ತೆಗೆ ೩ ಕೋಟಿ, ಕೆ.ಆರ್.ನಗರ ರಾಮನಾಥಪುರ ರಸ್ತೆಯಿಂದ ಸಿದ್ದನಕೊಪ್ಪಲು ರಸ್ತೆ ಅಭಿವೃದ್ದಿಗೆ ೧.೫ ಕೋಟಿ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದರ ಜತೆಗೆ ಕೆಸ್ತೂರು ಗೇಟ್ ಬಳಿ ಇರುವ ಕಾವೇರಿ ನದಿಯ ಏತ ನೀರಾವರಿ ಯೋಜನೆಯ ಕಾಮಗಾರಿಗೆ ೬೦ ಕೋಟಿ ಹಣ ಮೀಸಲಿರಿಸಿದ್ದು ಅದಕ್ಕೆ ಈಗಾಗಲೇ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು ಶೀಘ್ರದಲ್ಲಿಯೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗದಲ್ಲಿ ಒಳಾಂಗಣ ಕ್ರೀಡಾಂಗಣದ ಅಭಿವೃದ್ದಿ ಮತ್ತು ಕ್ರೀಡಾಂಗಣಕ್ಕೆ ಮೂಲ ಸವಲತ್ತು ಕಲ್ಪಿಸಲು ೨ ಕೋಟಿ ನೀಡಲಾಗಿದ್ದು ಆ ಕಾಮಗಾರಿಯೂ ತ್ವರಿತವಾಗಿ ಆರಂಭವಾಗಲಿದ್ದು ಸಾರ್ವಜನಿಕ ಆಸ್ಪತ್ರೆಗೆ ಕಾಯಕಲ್ಪ ನೀಡಲು ೧ ಕೋಟಿ ನಿಗದಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ವಿ.ಸುಮಿತಾ, ಶಾಸಕರ ಆಪ್ತ ಕಾರ್ಯದರ್ಶಿ ಮಹದೇವ್ ಸೇರಿದಂತೆ ಮತ್ತಿತರು ಹಾಜರಿದ್ದರು.